

ಮಂಡ್ಯ: ರಾಜಕೀಯ, ಸಾಹಿತ್ಯ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಮಂಡ್ಯ ಜಿಲ್ಲೆ ರಕ್ತದಾನದಲ್ಲಿಯೂ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ನಿರೀಕ್ಷೆಗೂ ಮೀರಿದ ಶಿಬಿರಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಇದು ರೋಗಿಗಳ ಪಾಲಿಗೆ ಸಂಜೀವಿನಿಯಂತಾಗಿದೆ.
ಜಿಲ್ಲೆಯ ಜನರು ಒರಟು ಎನ್ನಿಸಿಕೊಂಡರೂ ರಕ್ತದಾನ ಮಾಡುವ ವಿಚಾರದಲ್ಲಿ ಯಾವತ್ತಿಗೂ ಹಿಂದೆ ಬಿದ್ದಿಲ್ಲ. ಅವಶ್ಯಕ ಎನ್ನಿಸಿದಾಗಲೆಲ್ಲ ಶಿಬಿರ ಅಥವಾ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಇದರಿಂದಾಗಿ ರಕ್ತಕ್ಕೆ ತೀವ್ರ ಸಮಸ್ಯೆ ಎದುರಾದ ಉದಾಹರಣೆಗಳು ತೀರಾ ಕಡಿಮೆ ಎನ್ನಿಸಿಕೊಂಡಿದೆ.
ಶೇ.70ರಷ್ಟು ಶಿಬಿರ ಆಯೋಜನೆ: ಜಿಲ್ಲೆಯಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಂಡ್ಯ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೋಗಿಗಳು ಹಾಗೂ ಗಭಿರ್ಣಿಯರು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಜಿಲ್ಲೆಗೆ ಸುಮಾರು 1000 ಯೂನಿಟ್ ರಕ್ತದ ಅವಶ್ಯಕತೆ ಇರುತ್ತದೆ. ಅದರಂತೆಯೇ ಇದಕ್ಕೆ ಪೂರಕವಾಗಿಯೇ ಜಿಲ್ಲೆಯಲ್ಲಿ ಶಿಬಿರಗಳು ಆಯೋಜನೆಗೊಳ್ಳುತ್ತಿರುತ್ತವೆ. ಹಿಂದಿನ ವರ್ಷಗಳ ಇತಿಹಾಸವನ್ನು ಗಮನಿಸಿದರೆ ಜಿಲ್ಲೆಯಲ್ಲಿ ಶೇ.70ರಷ್ಟು ಶಿಬಿರಗಳನ್ನು ಸಂಘಟನೆಗಳು ಸಂಘಟಿಸುತ್ತಿವೆ. ಅಂತೆಯೇ ಶೇ.10ರಷ್ಟು ಜನರು ಸ್ವಯಂ ಪ್ರೇರಿತರಾಗಿ ಹೋಗಿ ರಕ್ತದಾನ ಮಾಡುತ್ತಾರೆ. ಇನ್ನು ಶೇ.20ರಷ್ಟನ್ನು ರೋಗಿಗಳಿಗೆ ಕೊಡುವ ರಕ್ತಕ್ಕೆ ಪರ್ಯಾಯವಾಗಿ ಅವರ ಸಂಬಂಧಿಕರಿಂದ ಪಡೆದುಕೊಳ್ಳಲಾಗುತ್ತಿದೆ.
ಇನ್ನು ಸಂಘಟನೆಗಳ ವಿಚಾರಕ್ಕೆ ಬಂದರೆ ಜೀವಧಾರೆ ಟ್ರಸ್ಟ್, ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಮಳವಳ್ಳಿ ಯುವಕ ಮಿತ್ರರು, ಶ್ರೀರಂಗಪಟ್ಟಣದ ಹಸಿರು ಕಲ್ಪವೃಕ್ಷ ಬಳಗ, ನೆಲದನಿ ಬಳಗ ಮಂಗಲ, ಪಾಂಡವಪುರ ಯುವಕ ಮಿತ್ರರು, ಸಮಾನ ಮನಸ್ಕರ ತಂಡ ಕೆ.ಎಂ.ದೊಡ್ಡಿ, ಮದ್ದೂರು ಸಿರಿ ಚಿಟ್ಸ್ ಫೌಂಡೇಷನ್, ತಾಲೂಕು ರಕ್ತಸಂಗ್ರಹಣಾ ಘಟಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಿಇಎಸ್, ಮಂಡ್ಯ ವಿಶ್ವವಿದ್ಯಾನಿಲಯ, ಮಿಮ್ಸ್, ಭಾರತೀ ಎಜುಕೇಷನ್ ಟ್ರಸ್ಟ್‌ಗಳು ರಕ್ತದಾನ ಶಿಬಿರಗಳ ಸಂಘಟಿಸುವಲ್ಲಿ ಮುಂಚೂಣಿಯಲ್ಲಿವೆ.
ದಾಖಲೆ ಬರೆದಿರುವ ಶಿಬಿರ: ಶಿಬಿರಗಳ ಪೈಕಿ ಕೆಲವು ಸಂಘಟನೆಗಳು ಜಿಲ್ಲೆಯಲ್ಲಿ ದಾಖಲೆ ಬರೆದಿವೆ. ಕಳೆದ ವರ್ಷ ಮದ್ದೂರಿನ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಒಂದೇ ಶಿಬಿರದಲ್ಲಿ 1,400 ಹೆಚ್ಚು ಯೂನಿಟ್ ರಕ್ತಸಂಗ್ರಹಿಸಿ ದಾಖಲೆ ಬರೆದಿತ್ತು. ಅಂತೆಯೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಮಳವಳ್ಳಿ ಯುವಕ ಮಿತ್ರರು 2018ರಲ್ಲಿ ಒಂದೇ ದಿನ 1,075 ಯುನಿಟ್ ರಕ್ತಸಂಗ್ರಹಿಸಿತ್ತು.
ಇನ್ನು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜೀವಧಾರೆ ಟ್ರಸ್ಟ್ 2019ರಲ್ಲಿ ಶಿಬಿರ ಆಯೋಜಿಸಿ ಒಂದೇ ದಿನ 904 ಯೂನಿಟ್ ರಕ್ತ ಸಂಗ್ರಹ ಮಾಡಿತ್ತು. ವಿಶೇಷವೆಂದರೆ ಸಾವಿರಾರೂ ಯುವಕರನ್ನು ಹೊಂದಿರುವ ಟ್ರಸ್ಟ್ ರಕ್ತದಾನದ ಜತೆಗೆ ರಾಜ್ಯದ ವಿವಿಧ ಜಿಲ್ಲೆಗೆ ತೆರಳಿ ಸೈನಿಕರನ್ನು ಸನ್ಮಾನಿಸುತ್ತಾರೆ. ಅಂಡಮಾನ್ ನಿಕೋಬಾರ್‌ನಲ್ಲಿ ಕಾರ್ಯಕ್ರಮ ಸಂಘಟಿಸಿದ ಹೆಗ್ಗಳಿಕೆಯನ್ನು ಟ್ರಸ್ಟ್ ಹೊಂದಿದೆ.
ಯಶಸ್ವಿ ಸಪ್ತಾಹಕ್ಕೆ ಡಿಸಿ, ಎಡಿಸಿ ಮಾದರಿ: ಇತ್ತೀಚೆಗೆ ವಿಧಾನಸಭಾ ಚುನಾವಣೆ ವೇಳೆಯಲ್ಲಿ ರಕ್ತದಾನಿಗಳಿಲ್ಲದೇ ಸಮಸ್ಯೆ ಕಾಣಿಸಿಕೊಂಡಿತ್ತು. ಬೇಡಿಕೆಯನ್ನು ಪೂರೈಸಲು ಅರ್ಧದಷ್ಟು ರಕ್ತ ಸಂಗ್ರಹವೂ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತೆಗೆದುಕೊಂಡ ನಿರ್ಧಾರ ಜಿಲ್ಲೆಯಲ್ಲಿ ಹೊಸ ಅಲೆ ಸೃಷ್ಟಿಸಿತು. ಸಪ್ತಾಹದ ಹೆಸರಿನಲ್ಲಿ ಜಿಲ್ಲಾದ್ಯಂತ ರಕ್ತಸಂಗ್ರಹ ಮಾಡಲಾಯಿತು. ಅದರಲ್ಲುಯೂ ಎಚ್.ಎಲ್.ನಾಗರಾಜು ಅವರು ಶಿಬಿರಗಳಿಗೆ ಹಾಜರಾಗಿ ಪ್ರೇರಣೆಯ ಮಾತುಗಳನ್ನಾಡುತ್ತಿರುವುದು ರಕ್ತದಾನಿಗಳ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತಿದೆ.
ಗಮನಾರ್ಹ ಅಂಶವೆಂದರೆ ಸರ್ಕಾರದಿಂದ ಆಚರಿಸುವ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗಿತ್ತು. ಇಂತಹ ಕಟ್ಟುಪಾಡುಗಳಿಗೆ ತಿಲಾಂಜಲಿ ಬಿಟ್ಟು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದ ಅಂಗವಾಗಿ ಜೂ.4ರಂದು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಖುದ್ದು ಡಿಸಿ, ಎಡಿಸಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಆ ಕಾರ್ಯಕ್ರಮದಲ್ಲಿ 210 ಯುನಿಟ್ ರಕ್ತಸಂಗ್ರಹ ಮಾಡಲಾಯಿತು. ಜಿಲ್ಲೆಯ ಮಟ್ಟಿಗೆ ಇದೊಂದು ರೀತಿ ದಾಖಲೆ ಎಂದರೂ ಅತಿಶಯೋಕ್ತಿಯಲ್ಲ. ಅಂತೆಯೇ ಸಪ್ತಾಹದಲ್ಲಿಯೂ 500ಕ್ಕೂ ಹೆಚ್ಚು ಯುನಿಟ್ ರಕ್ತಸಂಗ್ರಹಿಸಲಾಗಿದೆ.
ಸಂಗ್ರಹಕ್ಕೆ ಮೊಬೈಲ್ ವ್ಯಾನ್ ಬಲ: ಜಿಲ್ಲೆಯಲ್ಲಿ ರಕ್ತ ಸಂಗ್ರಹಕ್ಕೆ ಅನುಕೂಲವಾಗುವಂತೆ ಐ.ಸಿ.ಐ.ಸಿ.ಐ ಬ್ಯಾಂಕ್ ಸಿ.ಎಸ್.ಆರ್ ಯೋಜನೆಯಡಿ 37 ಲಕ್ಷ ರೂ ವೆಚ್ಚದ ಮೊಬೈಲ್ ರಕ್ತ ಸಂಗ್ರಹಣೆ ವಾಹನವನ್ನು ಮಿಮ್ಸ್‌ಗೆ ಹಸ್ತಾಂತರ ಮಾಡಿದೆ. ಮೊದಲೆಲ್ಲ ರಕ್ತದಾನ ಶಿಬಿರವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು. ಮೊಬೈಲ್ ರಕ್ತ ಸಂಗ್ರಹಣಾ ವಾಹನವನ್ನು ಉಪಯೋಗಿಸಿಕೊಂಡು ಗ್ರಾಮ ಮಟ್ಟದಲ್ಲೂ ಸಂಘಟಿಸಲು ಅನುಕೂಲವಾಗುತ್ತಿದೆ. ಕೆಲವೆಡೆ ಶಿಬಿರ ಆಯೋಜನೆ ಮಾಡಲು ಸ್ಥಳಾವಕಾಶದ ಸಮಸ್ಯೆ ಇರುತ್ತದೆ. ಅಂತಹ ಕಡೆ ವಾಹನದ ಸೌಲಭ್ಯ ಪಡೆದುಕೊಳ್ಳಬಹುದು. ಒಂದೇ ಬಾರಿಗೆ ಮೂವರು ರಕ್ತ ಕೊಡಲು ವ್ಯವಸ್ಥೆ ಇದೆ. ಮೇ.24ರಂದು ಮಿಮ್ಸ್ ಹಸ್ತಾಂತರವಾದ ನಂತರ ವಾಹನದಲ್ಲಿ ಸುಮಾರು 100 ಜನರಿಂದ ರಕ್ತದಾನ ಮಾಡಿದ್ದಾರೆ.