ಜೀವ ಉಳಿಸಲು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ

UDP-14-6-Blood
ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಐವರು ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಡಾ. ಅಶೋಕ್​ ಎಚ್​., ಡಾ. ಜಿ.ಎಸ್​. ಚಂದ್ರಶೇಖರ್​, ಬಸ್ರೂರು ರಾಜೀವ್​ ಶೆಟ್ಟಿ, ಡಾ. ಅಶೋಕಕುಮಾರ್​ ವೈ.ಜಿ., ರಮಾದೇವಿ, ವಾರ್ತಾಧಿಕಾರಿ ಮಂಜುನಾಥ್​, ಟಿ.ಚಂದ್ರಶೇಖರ್​, ರಾಘವೇಂದ್ರ ಪ್ರಭು ಕರ್ವಾಲ್​ ಇದ್ದರು.
Published on

ಜಿಲ್ಲಾ ಸರ್ಜನ್​ ಡಾ. ಅಶೋಕ್​ ಎಚ್​. ಕರೆ | ವಿಶ್ವ ರಕ್ತದಾನಿಗಳ ದಿನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾವುದೇ ಭೇದ-ಭಾವ ಇಲ್ಲದೆ ಅಗತ್ಯ ಇರುವವರಿಗೆ ರಕ್ತ ನೀಡುವುದು ನಮ್ಮೆಲ್ಲರ ಉದ್ದೇಶ, ಕರ್ತವ್ಯವಾಗಬೇಕಿದೆ. ಸಮಾಜದಲ್ಲಿ ರಕ್ತದ ನಿರಂತರ ಸೇವೆಯ ಅವಶ್ಯಕತೆ ಇದ್ದು, ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸುವ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್​ ಡಾ. ಅಶೋಕ್​ ಎಚ್​. ಕರೆ ನೀಡಿದರು.

ಉಡುಪಿಯ ಅಜ್ಜರಕಾಡಿನಲ್ಲಿರುವ ರೆಡ್​ಕ್ರಾಸ್​ ಭವನದ ಹೆನ್ರಿ ಡ್ಯುನಾಂಟ್​ ಹಾಲ್​ನಲ್ಲಿ ಭಾರತೀಯ ರೆಡ್​ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಕ್ತದಾನಿಗಳ ಜಿಲ್ಲೆ ಉಡುಪಿ

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹೀಗಾಗಿ ರಕ್ತದಾನಿಗಳ ಮೂಲಕ ರಕ್ತ ಪಡೆದು ಅವರ ಜೀವ ಉಳಿಸಲಾಗುತ್ತಿದೆ. ಉಡುಪಿಯು ರಕ್ತದಾನಿಗಳ ಜಿಲ್ಲೆಯಾಗಿದ್ದು, ಇಲ್ಲಿ ಅನೇಕರು ನಿರಂತರ ರಕ್ತದಾನದ ಮೂಲಕ ಅದೆಷ್ಟೋ ಜನರ ಜೀವ ಉಳಿಸಲು ಕಾರಣೀಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.

ಐವರು ರಕ್ತದಾನಿಗಳಿಗೆ ಸನ್ಮಾನ

ಅನೇಕ ಬಾರಿ ರಕ್ತದಾನ ಮಾಡಿ ನಿರಂತರ ಸೇವೆಯಲ್ಲಿ ತೊಡಗಿರುವ ರಕ್ತದಾನಿಗಳಾದ ಬನ್ನಾಡಿ ರಾಘವೇಂದ್ರ ಶೆಟ್ಟಿ, ಸುದರ್ಶನ್​ ಕೆ. ಕುಂದಾಪುರ, ಕೆ.ದೀಪಕ್​ ಕಾಮತ್​, ಹರೀಶ್​ ಅಮೀನ್​ ಹಾಗೂ ಚೇತನ್​ಕುಮಾರ್​ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ರೆಡ್​ಕ್ರಾಸ್​ ಉಡುಪಿ ಟಕದ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಮಾತನಾಡಿ, ಯುವಜನತೆ ರಕ್ತದಾನದ ಮಹತ್ವ ಅರಿತುಕೊಂಡು, ರಕ್ತದಾನದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ರೆಡ್​ಕ್ರಾಸ್​ ಆಡಳಿತ ಮಂಡಳಿ ಸದಸ್ಯ ಟಿ.ಚಂದ್ರಶೇಖರ್​, ಸಂಸ್ಥೆಯ ಸಿಬ್ಬಂದಿ ಹಾಗೂ ಕಾಲೇಜ್​ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾರತೀಯ ರೆಡ್​ಕ್ರಾಸ್​ ಉಡುಪಿ ಸಂಸ್ಥೆಯ ಉಪ ಸಭಾಪತಿ ಡಾ. ಅಶೋಕಕುಮಾರ್​ ವೈ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಖಜಾಂಜಿ ರಮಾದೇವಿ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲ್​ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯ ವೃದ್ಧಿ, ಇನ್ನೊಬ್ಬರ ಜೀವ ರಕ್ಷಣೆ

ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಮಾತನಾಡಿ, ದಾನಗಳಲ್ಲಿ ಇದೀಗ ರಕ್ತದಾನವೂ ಶ್ರೇಷ್ಠವಾಗಿದೆ. ಯುವ ಜನತೆ ಜೀವನದಲ್ಲಿ ಹಾಗೂ ಕಾಲೇಜ್​ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಕ್ತದಾನದಿಂದಾಗಿ ಆರೋಗ್ಯ ಹದಗೆಡದು. ಈ ಸೇವೆಯಿಂದ ಮತ್ತೊಬ್ಬರ ಜೀವ ರಕ್ಷಿಸಿದಂತಾಗುತ್ತದೆ. ಅಲ್ಲದೆ, ರಕ್ತ ನೀಡಿದವರ ಆರೋಗ್ಯವೂ ವೃದ್ಧಿಸುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net