

ಮಡಿಕೇರಿ:
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೊಡಗು ವಿಶ್ವ ವಿದ್ಯಾಲಯ, ಭಾರತೀಯ ರೆಡ್‌ಕ್ರಾಸ್ ಘಟಕ ಸಂಯುಕ್ತ ಆಶ್ರಯದಲ್ಲಿ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯಿತು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು 20 ವರ್ಷಗಳಿಂದ ಆಚರಿಸುತ್ತಾ ಬಂದಿದ್ದು, ನಿರಂತರವಾಗಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.
ರಕ್ತದಾನದ ಬಗ್ಗೆ ಸ್ಪಷ್ಟತೆಯನ್ನು ಪಡೆಯುವಂತೆ ಹೇಳಿದರು. ಮುಂಬರುವ ದಿನಗಳಲ್ಲಿ ಕೊಡಗು ವಿಶ್ವ ವಿದ್ಯಾಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಕ್ರಮವಹಿಸುವುದಾಗಿ ಹೇಳಿದರು..
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇರುವ ಬಗ್ಗೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಇರುವ ಕಾರಣ ರಕ್ತ ಹಾಗೂ ಪ್ಲೇಟ್‌ಲೇಟ್‌ಗಳ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು.
ರಕ್ತದ ಅವಶ್ಯಕತೆ ಹಾಗೂ ರಕ್ತದಾನದ ಮಹತ್ವ ಮತ್ತು ಉಪಯೋಗಗಳ ಕುರಿತು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅರಿವು ಮೂಡಿಸಿದರು.
ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ರಕ್ತದ ಕೊರತೆಯಾಗಬಾರದು. ರಕ್ತದ ಅವಶ್ಯಕತೆ ಇದ್ದಾಗ ತಾವು ಕೈಜೋಡಿಸುವುದಾಗಿ ತಿಳಿಸಿದರು. ನಂತರ ರಕ್ತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ, ಜಿಲ್ಲಾ ಮೇಲ್ವಿಚಾರಕಿ ಸುನಿತಾ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಉಷಾ, ಕಮಲ, ಮುತ್ತಮ್ಮ, ಐಸಿಟಿಸಿ ಆಪ್ತ ಸಮಾಲೋಚಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಕೊಡಗು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು ರಕ್ತದಾನ ಮಾಡಿದರು.
ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಜಮೀರ್ ಅಹಮದ್, ಸುದರ್ಶನ್ ಕುಮಾರ್ ಮತ್ತಿತರರು ಇದ್ದರು.