

ತುಮಕೂರು: ರಾಜ್ಯದ 41 ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸುವ ಉದ್ದೇಶದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಅಟಲ್ ಭೂಜಲ್’ ಯೋಜನೆಯಡಿ ತುಮಕೂರು ಜಿಲ್ಲೆಯ ಪ್ರಗತಿಗೆ ವಿಶ್ವಬ್ಯಾಂಕ್ ಪ್ರಶಂಸೆ ವ್ಯಕ್ತಪಡಿಸಿದೆ. 6 ತಾಲೂಕುಗಳು ಪ್ರಾಯೋಗಿಕ ಯೋಜನೆ ವ್ಯಾಪ್ತಿಯಲ್ಲಿದ್ದು, ಸಣ್ಣ ನೀರಾವರಿ ಹಾಗೂ ಅಂತರ್ಜಲ ನಿರ್ದೇಶನಾಲಯ ರೂಪಿಸಿರುವ ನೀಲಿನಕ್ಷೆಯನ್ನೇ ಇಡೀ ದೇಶಕ್ಕೆ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳಲ್ಲಿ ಅತಿಯಾದ ಅಂತರ್ಜಲ ಬಳಸಲಾಗಿದೆ. ಯೋಜನೆ ಅನುಷ್ಠಾನಕ್ಕೆ 1200ಕೋಟಿ ರೂ. ಹಣಕಾಸು ನೆರವು ನೀಡುವ ವಿಶ್ವಬ್ಯಾಂಕ್, ಭಾರತ ಸರ್ಕಾರಕ್ಕೆ ಪತ್ರ ಬರೆದು ಪ್ರಶಂಸಿಸಿದೆ. ತುಮಕೂರು, ಕೊರಟಗೆರೆ, ಮಧುಗಿರಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕುಗಳನ್ನು ಅಂತರ್ಜಲ ಶೋಷಿತ ಎಂದು ಗುರುತಿಸಲಾಗಿದೆ. 2019 ಡಿ.25ರಿಂದ ಜಿಲ್ಲೆಯಲ್ಲಿ ಯೋಜನೆ ಪ್ರಗತಿಯಲ್ಲಿದೆ.
ಯೋಜನೆ ಉದ್ದೇಶ!: ವಿವಿಧ ಕಾರ್ಯಯೋಜನೆ ಮೂಲಕ ಅಂತರ್ಜಲ ಬಳಕೆ ಕಡಿಮೆಗೊಳಿಸುವುದು ಉದ್ದೇಶವಾಗಿದೆ. ಬಾವಿ, ಕೊಳವೆಬಾವಿ, ನದಿ, ಕೆರೆ, ಕೃಷಿಹೊಂಡ, ಚೆಕ್ ಡ್ಯಾಂ ನಿರ್ಮಾಣ, ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಣೆ, ಸುಸ್ಥಿರ ಅಂತರ್ಜಲ ನಿರ್ವಹಣೆ, ನೀರಿನ ಮಿತವ್ಯಯ ಬಳಕೆ ಬಗ್ಗೆ ಜನ ಜಾಗೃತಿ, ಜನ-ಜಾನುವಾರುಗಳಿಗೆ ಗುಣಮಟ್ಟದ ನೀರು ಒದಗಿಸುವ, ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ, ಅಂತರ್ಜಲ ಮರುಪೂರೈಕೆ ಮಾಡುವ ಯೋಜನೆಯಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತೀ 2 ವರ್ಷಗಳಿಗೊಮ್ಮೆ ರಾಜ್ಯದ ಅಂತರ್ಜಲ ಸಂಪನ್ಮೂಲದ ಮೌಲೀಕರಣ ಮಾಡಲಾಗುತ್ತಿದೆ. ಮೌಲೀಕರಣವನ್ನು ಅಂತರ್ಜಲ ಅತಿಬಳಕೆ, ಕ್ಲಿಷ್ಟಕರ, ಅರೆ ಕ್ಲಿಷ್ಟಕರ, ಸುರಕ್ಷಿತ ಎಂದು ವರ್ಗೀಕರಿಸಲಾಗಿದೆ. ಅದರಂತೆ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು ತಾಲೂಕು ಅಂತರ್ಜಲ ಅತಿ ಬಳಕೆ, ಶಿರಾ ಕ್ಲಿಷ್ಟಕರ, ಪಾವಗಡ ಅರೆ ಕ್ಲಿಷ್ಟಕರ ಹಾಗೂ ಗುಬ್ಬಿ, ಕುಣಿಗಲ್, ತುರುವೇಕೆರೆ ತಾಲೂಕು ಸುರಕ್ಷಿತ ಎಂದು ವರ್ಗೀಕರಿಸಲಾಗಿದೆ.
ವಿಶ್ವಬ್ಯಾಂಕ್ ಮೆಚ್ಚಿದ ಅಂಶಗಳೇನು?: ನೀರಿನ ಲಭ್ಯತೆ ಆಧರಿಸಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ನೀರು ಒದಗಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬಾವಿ, ಕೊಳವೆ ಬಾವಿ, ನದಿ, ಕೆರೆ, ಕೃಷಿಹೊಂಡ, ಚೆಕ್ ಡ್ಯಾಮ್ ಇತ್ಯಾದಿ ಆಧರಿಸಿ ನೀರಿನ ಆಯವ್ಯಯ ತಯಾರಿಸುವ ಜತೆಗೆ ಕೃಷಿಗೆ, ಜನ, ಜಾನುವಾರುಗಳಿಗೆ ಕುಡಿಯಲು, ದೈನಂದಿನ ಬಳಕೆಯ ಬೇಡಿಕೆಗೆ ಅನುಗುಣವಾಗಿ ಸಮಗ್ರ ನೀರಿನ ಭದ್ರತಾ ಯೋಜನೆ ರೂಪಿಸಿರುವುದು. ಕೃಷಿ, ತೋಟಗಾರಿಕೆ ಮತ್ತಿತರ ಕೃಷಿ ಸಂಬಂಧಿತ ಇಲಾಖೆ ಜತೆ ಸಮನ್ವಯ ಸಾಧಿಸಿ ನೀರಾವರಿ ಯೋಜನೆ ರೂಪಿಸುವುದು.
ಅಂತರ್ಜಲ ವೃದ್ಧಿಸುವುದು ಜಿಲ್ಲೆಯಲ್ಲಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರದ ಅನುದಾನ ಬಳಸಿಕೊಂಡು ರಾಜ್ಯದ 41 ತಾಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ಅಗತ್ಯವಾದ ಯೋಜನೆ ಶೀಘ್ರದಲ್ಲಿ ಅನುಷ್ಠಾನವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ವಿಶ್ವಬ್ಯಾಂಕ್ ಎರಡು ಸಲ ಪ್ರಶಂಸೆ ವ್ಯಕ್ತಪಡಿಸಿರುವುದು ನಮಗೆ ಉತ್ಸಾಹ ನೀಡಿದೆ. ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಸಚಿವ