ಅಂಗವಿಕಲರಿಗೆ ತಾರತಮ್ಯ ಸಲ್ಲ : ರೇಖಾ ಜೆ.ಶೆಟ್ಟಿ ಹೇಳಿಕೆ

10
Published on

ಬಂಟ್ವಾಳ: ಸರ್ಕಾರದ ಮಟ್ಟದಲ್ಲಿ ವಿಶೇಷಚೇತನರಿಗೆ ಅನುದಾನ ಕಾದಿರಿಸಬೇಕು. ಇದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರಿವು ಪಡೆದುಕೊಳ್ಳಬೇಕು. ವಿಶೇಷಚೇತನ ಮಕ್ಕಳ ಗುರುತಿಸುವಿಕೆ ಪ್ರಾಥಮಿಕ ಹಂತದಲ್ಲೇ ಆಗಬೇಕಿದ್ದು, ಶಿಕ್ಷಕರಾದವರು ತರಗತಿಯಲ್ಲಿ ಇತರ ಮಕ್ಕಳೊಂದಿಗೆ ಹೋಲಿಸಿ, ತಾರತಮ್ಯ ಮಾಡಬಾರದು ಎಂದು ಬಂಟ್ವಾಳ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಹೇಳಿದರು.

ವಿಕಾಸಂ ಸೇವಾ ಫೌಂಡೇಷನ್, ಸಕ್ಷಮ ದಕ್ಷಿಣ ಕನ್ನಡ ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ ವಿಶ್ವ ಆಟಿಸಂ ದಿನ ಉದ್ಘಾಟಿಸಿ ಮಾತನಾಡಿದರು.

ಸಕ್ಷಮ ಭಾರತ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಸವಲತ್ತುಗಳನ್ನು ನೀಡಲು ಸರ್ಕಾರ ವಿಳಂಬಿಸಬಾರದು. ಕಳೆದ ಎರಡು ತಿಂಗಳಿಂದ ಮಕ್ಕಳ ಸವಲತ್ತು ದೊರಕಿಲ್ಲ ಎಂದರು.

ಸಿದ್ದಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ್ ಭಟ್, ಬಂಟ್ವಾಳ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಮಮ್ತಾಜ್ ಉಪಸ್ಥಿತರಿದ್ದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಪ್ರಸನ್ನಕುಮಾರ್, ಉದಯಕುಮಾರ್ ಸಿ.ಆರ್. ಶುಭ ಹಾರೈಸಿದರು.

ವಿಕಾಸಂ ಸ್ಥಾಪಕ ನಿರ್ದೇಶಕ ಧರ್ಮಪ್ರಸಾದ್ ರೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಭಟ್ ವಾರಣಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಮಾನಸಾ ಕಾರ್ಯಕ್ರಮ ನಿರ್ವಹಿಸಿದರು. ಸಕ್ಷಮ ವತಿಯಿಂದ ವಿಕಾಸಂ ಫೌಂಡೇಷನ್ ಗೆ ಕಲಿಕಾ ಚಟುವಟಿಕೆ ವಸ್ತುಗಳನ್ನು ಒದಗಿಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟಕ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net