

ಮಡಿಕೇರಿ: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಕೊಡಗು ವಿದ್ಯಾಲಯದ ವತಿಯಿಂದ ರಾಜಾಸೀಟ್‌ನಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ೨೫ ಶಿಬಿರಾರ್ಥಿಗಳು ಕಲಾ ಶಿಕ್ಷಕರೊಂದಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಬುಧವಾರ ಆಚರಿಸಿದರು.
ದಿನದ ವಿಶೇಷತೆಯ ಕುರಿತು ಮಾತನಾಡಿದ ಶಿಕ್ಷಕಿ ವಿಶ್ಮ, ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ರೀತಿಯ ಕಲಾವಿದರಾಗಿದ್ದಾರೆ. ಶೈಕ್ಷಣಿಕವಾಗಿ ಕೂಡ ಕಲೆ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಭಾವನಾತ್ಮಕ ರೀತಿಯಲ್ಲಿ ಬುದ್ಧಿ ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಚಿತ್ರ ಕಲಾ ಸಂಪನ್ಮೂಲ ವ್ಯಕ್ತಿಗಳಾದ ಟಿ.ಬಿ.ಪ್ರಸನ್ನ ಕುಮಾರ್, ಪ್ರದೀಪ್ ಪವನ್, ಕೆ.ಸಂಜಯ್ ಮತ್ತು ಗುರು ಹಿರೇಮಠ್ ಅವರು ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಹೈದರಾಬಾದ್‌ನಿಂದ ಮಡಿಕೇರಿಗೆ ಪ್ರವಾಸ ಬಂದಿದ್ದ ಕಲಾವಿದ ಶರೀಫ್ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡು ತನ್ನ ಕಲೆಯ ಸೊಬಗನ್ನು ಕುಂಚದಲ್ಲಿ ಮೂಡಿಸಿದ್ದು ವಿಶೇಷವಾಗಿತ್ತು. ಕೊಡಗು ವಿದ್ಯಾಲಯದ ವತಿಯಿಂದ ಶರೀಫ್ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳು ಹಾಗೂ ಕಲಾವಿದರು ಸಹ ನೈಸರ್ಗಿಕ ಸೌಂದರ್ಯದ ಮಧ್ಯೆ ಆಸಕ್ತಿಯಿಂದ ಚಿತ್ರಕಲಾ ಚಟುವಟಿಕೆಯಲ್ಲಿ ತೊಡಗಿದ್ದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರ, ಆಡಳಿತ ನಿರ್ವಹಣಾಧಿಕಾರಿ ಪಿ.ರವಿ ಉಪಸ್ಥಿತರಿದ್ದರು. ಪೋಷಕ ವೃಂಧದವರು, ಶಿಬಿರಾರ್ಥಿಗಳು, ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.