

ಮಂಡ್ಯ: ಮಾದಕ ವಸ್ತುಗಳು ಯುವಜನರಿಗೆ ಮಾರಕವಾಗಿ ಪರಿಣಮಿಸಿದೆ. ಆದ್ದರಿಂದ ದುಶ್ಚಟದಿಂದ ದೂರವಾದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್ ಕುಮಾರ್ ಸಲಹೆ ನೀಡಿದರು.
ನಗರದ ಸಿಹಿನೀರು ಕೊಳದ ಆರ್.ಜಿ ವ್ಯಸನಿಗಳ ಪುನಶ್ವೇತನ ಕೇಂದ್ರದಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಧ್ವನಿ ಗ್ರಾಮೀಣಾಭಿ ವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುವುದಲ್ಲದೇ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ಮಾತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ ಎಂದರು.
ಮಕ್ಕಳಿಗೆ ಪಾಲಕರು ಮೊದಲು ಮಾದರಿ ವ್ಯಕ್ತಿಗಳಾಗಬೇಕು. ಉತ್ತಮವಾದ ಶಿಕ್ಷಣವನ್ನು ಕೊಡಿಸಬೇಕು. ಜವಾಬ್ದಾರಿಯನ್ನು ಮರೆತು ದುಶ್ಚಟಗಳಿಗೆ ಬಲಿಯಾದಾಗ ಸಮಾಜದಲ್ಲಿ ಗೌರವವಿಲ್ಲ. ಸಣ್ಣ ಹಳ್ಳಿಗಳಲ್ಲಿ ಯುವ ಜನತೆ, ವಿದ್ಯಾರ್ಥಿಗಳು ಗಾಂಜಾಕ್ಕೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧ್ವನಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ವ್ಯಸನಿಗಳು ಚಿಕಿತ್ಸೆ ಪಡೆದು ವ್ಯಸನ ತ್ಯಜಿಸಿ ಬೇರೆಯವರಿಗೂ ಮನ ಪರಿವರ್ತನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಯುವಜನತೆ ವ್ಯಸನದಷ್ಟೇ ಆನ್‌ಲೈನ್ ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ. ಇದು ವ್ಯಸನಕ್ಕಿಂತ ಬಹಳ ಕೆಟ್ಟದು. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಜೂಜಾಟಕ್ಕೆ ನಿಷೇಧಿಸಲು ಒತ್ತಾಯಿಸಬೇಕು. ಇದು ದೇಶದಲ್ಲಿ ಕೆಟ್ಟ ಪರಿಣಾಮವಾಗಿ ಪರಿಣಮಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಗುರು ಹಿರಿಯರ ಬಗ್ಗೆ ಯುವ ಜನರಲ್ಲಿ ಗೌರವವಿಲ್ಲದ ಮನಸ್ಥಿತಿ ಬೆಳೆಯುತ್ತಿದೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಮಾರಕವಾಗಿದ್ದು, ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದು ತಿಳಿಸಿದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿಶ್ವವಿದ್ಯಾಲಯದ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಜಯ್ ಎಸ್.ಹೂಗಾರ್ ಅವರು ಮದ್ಯಪಾನದಿಂದಾಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು. ನಗರಸಭಾ ಸದಸ್ಯರಾದ ಪೂರ್ಣಿಮಾ, ಭಾರತೀಶ್, ಪುನಶ್ಚೇತನಾ ಕೇಂದ್ರದ ಯೋಜನಾ ನಿರ್ದೇಶಕಿ ಡಿ.ತೇಜಕುಮಾರಿ, ಕೃಷ್ಣೇಗೌಡ, ಪ್ರಸನ್ನಕುಮಾರ್ ಇತರರಿದ್ದರು.