

ಮಂಡ್ಯ: ಮಕ್ಕಳನ್ನು ದುಡಿಮೆಯಿಂದ ದೂರ ಮಾಡಿ ಕಡ್ಡಾಯವಾಗಿ ಶಿಕ್ಷಣ ದೊರಕಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಅನಕ್ಷರಸ್ಥ ಕುಟುಂಬ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಕಾರಣಗಳಿಂದ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುವುದನ್ನು ನೋಡಿದ್ದೇವೆ. ಸರ್ಕಾರ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಹಲವಾರು ಕಾಯ್ದೆ ಹಾಗೂ ಕಾನೂನು ಜಾರಿಗೆ ತಂದಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದು ಹಾಗೂ ಅರಿವು ಮೂಡಿಸುವುದು ಬಾಲ ಕಾರ್ಮಿಕ ವಿರೋಧಿ ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಪ್ರತಿದಿನ ನಮ್ಮ ನಿತ್ಯ ಜೀವನದಲ್ಲಿ ಬಾಲ ಕಾರ್ಮಿಕರನ್ನು ಕಂಡಲ್ಲಿ ಅವರನ್ನು ರಕ್ಷಿಸಿ ಶಿಕ್ಷಣ ಎಂಬ ಮುಖ್ಯವಾಹಿನಿಗೆ ತರಬೇಕು. ಬಾಲ ಕಾರ್ಮಿಕ ಪದ್ಧತಿ ಎಂಬ ಅನಿಷ್ಟ ಪದ್ಧತಿ ಸಮಾಜದಲ್ಲಿ ಬೆಳೆಯದಂತೆ ತಡೆಗಟ್ಟಬೇಕು ಎಂದು ಹೇಳಿದರು.
ಗ್ಯಾರೇಜ್, ಹೋಟೆಲ್ ಮುಂತಾದ ಸ್ಥಳಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುವುದು ಕಂಡುಬಂದರೆ ತಕ್ಷಣ ಕಾರ್ಮಿಕ ಇಲಾಖೆಯ ಗಮನಕ್ಕೆ ತರಬೇಕು. ಈ ಮೂಲಕ ಮಕ್ಕಳನ್ನು ರಕ್ಷಿಸಿ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಿ. ನನಗೂ ಬಾಲಕಾರ್ಮಿಕ ಪದ್ಧತಿಗೂ ಸಂಬಂಧವಿಲ್ಲ ಎಂಬ ರೀತಿ ವರ್ತಿಸಬೇಡಿ, ಮಾನವೀಯತೆಯನ್ನು ಬೆಳೆಸಿಕೊಳ್ಳಿ. ಬಡತನ ಎಂಬುವುದು ಶಾಶ್ವತವಲ್ಲ, ಬಡತನ ನಿರ್ಮೂಲನೆ ಆಗಬೇಕು ಎಂದರೆ ಮೊದಲು ಮಕ್ಕಳಿಗೆ ಶಿಕ್ಷಣ ಸಿಗಬೇಕು. ಆಗ ಮಾತ್ರ ಬಡತನ ನಿರ್ಮೂಲನೆ ಆಗಲು ಸಾಧ್ಯ. ಪಾಲಕರು ಬಡತನದ ನೆಪ ಮಾಡಿ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ತಳ್ಳಬೇಡಿ. ಹೆತ್ತವರು ಆಸ್ತಿಯನ್ನು ಮಾಡಬೇಡಿ, ಬದಲಿಗೆ ಮಕ್ಕಳನ್ನೆ ಆಸ್ತಿಯನ್ನಾಗಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಕಾರ್ಮಿಕ ಕಾನೂನುಗಳ ಸಲಹೆಗಾರ ವಿಜಯ್‌ದೇವ್ ನಾಯ್ಕ ಇತರರಿದ್ದರು.