ಏಡ್ಸ್ ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿಯಲಿ: ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಹೇಳಿಕೆ

World AIDS Day Mandya
Published on

ಮಂಡ್ಯ: ಏಡ್ಸ್ ರೋಗಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಂಕಿ ಅಂಶಗಳ ಮೂಲಕ ತಿಳಿಸುತ್ತಿವೆ. ಈ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕು ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಹೇಳಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ವಿವಿಧ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಿ.1ರಂದು ಪ್ರತಿ ವರ್ಷವೂ ವಿಶ್ವ ಏಡ್ಸ್ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ: ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷವಾಕ್ಯದಡಿಯಲ್ಲಿ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಈ ರೋಗಕ್ಕೆ ತುತ್ತಾದ ವ್ಯಕ್ತಿಯು ದೀರ್ಘಕಾಲ ಬದುಕುವಂತೆ ಔಷಧವನ್ನು ಕಂಡುಹಿಡಿಯಲಾಗಿದೆ. ಆದರೆ ಸಂಪೂರ್ಣವಾಗಿ ಹೋಗಲಾಡಿಸಲು ಇನ್ನೂ ಕೂಡ ಪರಿಣಾಮಕಾರಿ ಔಷಧವಿಲ್ಲ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, 1986ರಿಂದಲೂ ಏಡ್ಸ್ ರೋಗದ ವಿರುದ್ಧ ಹೋರಾಡುತ್ತಿದ್ದು, ಎಚ್‌ಐವಿ ಸೋಂಕು ಹರಡುವ ವಿಧಾನವನ್ನು ತಿಳಿದುಕೊಳ್ಳಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕಾರಣಗಳಿಂದ ಸೋಂಕು ಬರುವ ಸಾಧ್ಯತೆ ಇದೆ. ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡುತ್ತಿದ್ದು, ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಸೋಂಕಿತರಿಗೆ ಸಾರ್ವಜನಿಕರು ಆತ್ಮಸ್ಥೈರ್ಯ ತುಂಬಿ ಅವರ ಜೀವಿತಾವಧಿಯನ್ನು ಹೆಚ್ಚು ಮಾಡವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಜನರಿಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸೋಂಕಿನಿಂದ ಬಳಲುತ್ತಿರುವವರಿಗೆ ತಾರತಮ್ಯ ಮಾಡದೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಒದಗಿಸುವುದು ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.

ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ರೋಗವನ್ನು ತಡೆಗಟ್ಟುವುದು ಕೇವಲ ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯು ಕೂಡ ಆಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ನಿವೃತ್ತ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕೆ.ಜಿ.ಭವಾನಿಶಂಕರ್ ಇತರರಿದ್ದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಾಥಾ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸಮಾವೇಶಗೊಂಡಿತು. ತದನಂತರ ಡಿಎಚ್‌ಒ ಡಾ.ಕೆ.ಮೋಹನ್ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net