ಮುನ್ನೆಚ್ಚರಿಕೆಯಿಂದ ಮಾತ್ರ ಎಚ್​ ಐ ವಿ ತಡೆಯಲು ಸಾಧ್ಯ

udp-2-dc
Published on

ಉಡುಪಿ: ಜನಸಾಮಾನ್ಯರು ಎಚ್​.ಐ.ವಿ ರೋಗದ ಹರಡುವಿಕೆ, ಪರಿಣಾಮಗಳ ಬಗ್ಗೆ ಅರಿವು ಹೊಂದಿರಬೇಕು. ಮುನ್ನೆಚ್ಚರಿಕೆ ವಹಿಸಿದ್ದಲ್ಲಿ ಮಾತ್ರ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

ಅಂಬಲಪಾಡಿ ಪ್ರಗತಿಸೌಧ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್​ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್​ಕ್ರಾಸ್​ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್​ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚು ಈ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಯುವಜನರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಬೇಕು. ಏಡ್ಸ್​ ಒಂದು ಮಾರಕ ಕಾಯಿಲೆಯಾಗಿದ್ದು, ಇದು ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಏಡ್ಸ್​ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ತಮ್ಮದಲ್ಲದ ತಪ್ಪಿನಿಂದಾಗಿ ಹಲವರು ಏಡ್ಸ್​ ರೋಗಕ್ಕೆ ತುತ್ತಾಗುತ್ತಾರೆ. ಅಸುರಕ್ಷಿತ ಲೈಂಗಿಕತೆ, ಸೋಂಕಿತರ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿಂದ, ಆಸ್ಪತ್ರೆಗಳಲ್ಲಿ ಸಂಸ್ಕರಣೆ ಮಾಡದ ಸಿರಿಂಜ್​ ಬಳಕೆ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮೂಲಕ ಈ ರೋಗ ಹರಡುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಈ ರೋಗಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷದೋಪಚಾರಗಳನ್ನು ನೀಡಲಾಗುತ್ತಿದೆ ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್​ ಯೋಗೇಶ್​ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯವನ್ನು ಕಾಯ್ದುಕೊಳ್ಳುವ ಹಕ್ಕಿದೆ. ಎಚ್​.ಐ.ವಿ. ಜೊತೆಗೆ ಬದುಕನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ರ್ನಿಲಕ್ಷ$್ಯ ಮಾಡದೇ ಉದ್ಯೋಗ, ವಿದ್ಯಾಭ್ಯಾಸ ಇನ್ನಿತರ ಕ್ಷೇತ್ರದಲ್ಲಿ ಹಕ್ಕುಗಳನ್ನು ಸಮನಾಗಿ ನೀಡಿ, ಅವರಲ್ಲಿನ ಮನೋಸೈರ್ಯ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಏಡ್ಸ್​ ನಿಯಂತ್ರಣ ಕಾರ್ಯಕ್ರಮದಡಿ ಗಣನೀಯ ಸೇವೆ ಸಲ್ಲಿಸಿದ ಅನುರಾಧ ವಿ.ಎಸ್​, ಜಯ ಸಾಲಿಯಾನ್​, ನರಸಿಂಹ ಮೂರ್ತಿ ವೈ, ಶ್ರೀನಿವಾಸ ಶೆಟ್ಟಿಗಾರ್​, ಚಂದ್ರಣ್ಣ, ಡಾ. ವ್ಯಾಸರಾಜ್​ ತಂತ್ರಿ, ಡಾ.ವಿಮಲ ಚಂದ್ರಶೇಖರ್​, ಶ್ರೀಲತಾ, ಡಾ. ನವನೀತ ಕೆ.ಪಿ ಹಾಗೂ ಎಝಿಲ್​ ಮೆಲ್ವಿನ್​ ಕ್ಯಾಸ್ತಲಿನೊ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್​, ಜಿಲ್ಲಾ ಸರ್ಜನ್​ ಡಾ. ಎಚ್​. ಅಶೋಕ್​, ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಎಸ್​.ಕೆ.ಆರ್​.ಡಿ.ಪಿ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಭಾರತೀಯ ರೆಡ್​ಕ್ರಾಸ್​ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ಬಿ.ಎಂ. ಸ್ವಾಗತಿಸಿ, ಮಂಜುನಾಥ ಗಾಣಿಗ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net