ಎಚ್​.ಐ.ವಿ ಪೀಡಿತರೊಂದಿಗೆ ತಾರತಮ್ಯ ಸಲ್ಲದು: ಜಿಲ್ಲಾಧಿಕಾರಿ

udp-1-hiv
Published on

ಉಡುಪಿ: ಏಡ್ಸ್​ ರೋಗಿಗಳು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ. ಆವರೊಂದಿಗೆ ತಾರತಮ್ಯ ಸಲ್ಲದು. ಕಾಯಿಲೆ ಖಚಿತವಾದ ನಂತರ ಸೂಕ್ತ ಚಿಕಿತ್ಸೆ ಪಡೆದು, ಆತ್ಮವಿಶ್ವಾಸದಿಂದ ರೋಗವನ್ನು ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ನಗರದ ಅಂಬಲಪಾಡಿ ಪ್ರಗತಿ ಸೌಧ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್​ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾರತ್ನ ಸ್ಕೂಲ್​ ಕಾಲೇಜ್​ ಆಫ್​ ನರ್ಸಿಂಗ್​, ಶ್ರೀ ಆದರ್ಶ ಕಾಲೇಜ್​ ಆಫ್​ ನರ್ಸಿಂಗ್​, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಪ್ರಗತಿ ಸೌಧ, ಲಯನ್ಸ್​ ಕ್ಲಬ್​ ಉಡುಪಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಉದ್ಯಾವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್​ ದಿನ ಜಾಥಾ ಮತ್ತು ಜಾಗೃತಿ ಉದ್ಘಾಟಿಸಿ ಮಾತನಾಡಿದರು.

ಏಡ್ಸ್​ ಒಂದು ಮಾರಕ ಕಾಯಿಲೆಯಾಗಿದ್ದು, ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದರಿಂದ ರೋಗದಿಂದ ದೂರ ಉಳಿಯಲು ಸಾಧ್ಯ . ತಮ್ಮದಲ್ಲದ ತಪ್ಪಿನಿಂದಾಗಿ ಹಲವರು ಏಡ್ಸ್​ ರೋಗಕ್ಕೆ ತುತ್ತಾಗುತ್ತಾರೆ. ಅಸುರಕ್ಷಿತ ಲೈಂಗಿಕತೆ, ಸೋಂಕಿತರ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದು, ಆಸ್ಪತ್ರೆಗಳಲ್ಲಿ ಸಂಸ್ಕರಣೆ ಮಾಡದ ಸಿರಿಂಜ್​ ಬಳಕೆ, ಸೋಂಕಿತ ತಾಯಿಯಿಂದ ಮಗುವಿಗೆ ರೋಗ ಹರಡುತ್ತದೆ. ಯುವ ಜನತೆ ಕ್ಷಣಿಕ ಸುಖಕ್ಕಾಗಿ ಬಲಿಯಾಗಬಾರದು ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶೆ ಶರ್ಮಿಳಾ ಎಸ್​ ಮಾತನಾಡಿ, ಎಚ್​.ಐ.ವಿ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹಲವು ರೋಗಗಳಿಗೆ ಒಳಗಾಗುತ್ತಾರೆ. ಎಚ್​.ಐ.ವಿ ಸೋಂಕಿತರಿಗೂ ಬದುಕುವ ಅರ್ಹತೆ ಇದೆ. ಅವರನ್ನು ಅಸ್ಪಷ್ಯರಂತೆ ಕಾಣದೇ ಸಮಾಜದ ಮುಖ್ಯ ವಾಹಿನಿಗೆ ತಂದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಏಡ್ಸ್​ ನಿಯಂತ್ರಣ ಕಾರ್ಯಕ್ರಮದಡಿ ಗಣನೀಯ ಸೇವೆ ಸಲ್ಲಿಸಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಮಿತಾ, ಮಣಿಪಾಲ ಐ.ಸಿ.ಟಿ.ಸಿ ಆಪ್ತ ಸಮಾಲೋಚಕಿ ಅನುರಾಧ ಜಿ., ಜಿಲ್ಲಾ ಆಸ್ಪತ್ರೆಯ ಎ.ಆರ್​.ಟಿ ಪ್ಲಸ್​ ಕೇಂದ್ರದ ಹಿರಿಯ ಆಪ್ತ ಸಮಾಲೋಚಕಿ ಮಂಜುಳಾ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಐ.ಸಿ.ಟಿ.ಸಿ ಪ್ರಯೋಗಶಾಲಾ ತಂತ್ರಜ್ಞೆ ಪ್ರತಿಮಾ, ಲಯನ್ಸ್​ ಕ್ಲಬ್​ ಮಣಿಪಾಲ ಅಧ್ಯಕ್ಷ ಡಾ. ಹೆಚ್​ ಗಣೇಶ್​ ಪೈ, ಸಂತೆಕಟ್ಟೆ ಪರಿವಾರ ಸಮಾಜ ಕೇಂದ್ರ ಗೊರಟ್ಟೆ ಆಸ್ಪತ್ರೆಯ ಸಿಸ್ಟರ್​ ಮೇಲಾನಿಯಾ ಡಿ ಸೋಜಾ ಹಾಗೂ ವಂಡ್ಸೆ ಆಸರೆ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಸಂಜೀವ್​ ವಂಡ್ಸೆ, ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಕಾಲೇಜಿನ ಎನ್​.ಎಸ್​.ಎಸ್​ ಯೋಜನಾಧಿಕಾರಿ ಡಾ. ರಾಜೇಂದ್ರ ಕೆ., ಎಂ.ಜಿ.ಎಂ ಕಾಲೇಜು ಎನ್​.ಎಸ್​.ಎಸ್​ ಯೋಜನಾಧಿಕಾರಿ ಸುಚಿತ್​ ಕೋಟ್ಯಾನ್​ ಮತ್ತು ಬಂಟಕಲ್​ ಶ್ರೀ ಮದ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎನ್​.ಎಸ್​.ಎಸ್​ ಯೋಜನಾಧಿಕಾರಿ ನಾಗರಾಜ್​ ಅವರನ್ನು ಸನ್ಮಾನಿಸಲಾಯಿತು.

ಮೈಸೂರು ವಿಭಾಗದ ವಿಭಾಗೀಯ ಆರೋಗ್ಯ ಮತ್ತು ಕು.ಕ. ಸೇವೆಗಳ ನಿರ್ದೇಶನಾಲಯದ ಉಪನಿರ್ದೇಶಕಿ ಡಾ. ಮಲ್ಲಿಕಾ ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್​, ಜಿಲ್ಲಾ ಸರ್ಜನ್​ ಡಾ. ವೀಣಾ ಕುಮಾರಿ, ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್​ ಮೆಸ್ತಾ, ಲಯನ್ಸ್​ ಕ್ಲಬ್​ ಉಡುಪಿ ಅಧ್ಯಕ್ಷ ಲಯನ್​ ಧನುಶ್​ ಕೆ. ಉಪಸ್ಥಿತರಿದ್ದರು.
ಮಂಜುನಾಥ ಗಾಣಿಗ ಸ್ವಾಗತಿಸಿ ನಿರೂಪಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net