

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಬೆಂಗಳೂರು ,ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠ ತಿಂತಿಣಿ, ಶ್ರೀಮೇದಾರ ಕೇತೇಶ್ವರ ಗುರುಪೀಠ ಚಿತ್ರದುರ್ಗದ ಆಶ್ರಯದಲ್ಲಿ ಆ. ೯ರಂದು ಬೆಳಗ್ಗೆ ೧೧ ಗಂಟೆಗೆ ದಾವಣಗೆರೆ ನಗರದ ಬಂಬೂ ಬಜಾರ್‌ನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ೩೦ನೇ ವಿಶ್ವ ಆದಿವಾಸಿ ದಿನಾಚರಣೆ ಆಯೋಜಿಸಲಾಗಿದೆ ಎಂದು ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂತಿಣಿ ,ವೀರಗೋಟದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠದ ಶ್ರೀ ಸಿದ್ದ ರಾಮಾನಂದ ಸ್ವಾಮೀಜಿ, ಚಿತ್ರದುರ್ಗದ ಮೇದಾರ ಕೇತೇಶ್ವರ ಗುರುಪೀಠದ ಪೀಠಾಧಿಪತಿಗಳಾದ ಶ್ರೀಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಲಿದ್ದಾರೆ ಎಂದು ಹೇಳಿದರು.
ಸ್ವಯಂ ಪ್ರೇರಿತ ಪ್ರತ್ಯೇಕತೆ ಮತ್ತು ಆರಂಭಿಕ ಸಂಪರ್ಕದಲ್ಲಿಯ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವುದು ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಆದಿವಾಸಿ ಪರಿಷತ್ ರಾಜ್ಯಾಧ್ಯಕ್ಷ ಕೃಷ್ಣಯ್ಯ ವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದ ಜನಜೀವನದ ಬಗ್ಗೆ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿರುವ ಮೂಲ ಆದಿವಾಸಿ ಸಮುದಾಯದ ೨೪ ಮಂದಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಂಪಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬುಡಕಟ್ಟು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ಇತ್ತಿಚೆಗೆ ನಿವೃತರಾಗಿರುವ ಹಾಗೂ ಕರ್ನಾಟಕ ರಾಜ್ಯ ಆದಿವಾಸಿ ಪರಿಷತ್‌ನ ಗೌರವಾಧ್ಯಕ್ಷ ಪ್ರೊ.ಡಾ.ಕೆ.ಎಂ ಮೇತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಪ್ರಶಸ್ತಿ ಗಳನ್ನು ಗಣಿಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್,೨೦೨೪ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಮೋಥಾ ಹಾಡಿಯ ಸೋಮಣ್ಣ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಬಸವರಾಜ ವಿ.ಶಿವಗಂಗಾ, ಶಾಸಕ ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನ ಗೌಡ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಎಸ್‌ಪಿ ಉಮಾ ಪ್ರಶಾಂತ್ ಉಪಸ್ಥಿತರಿರಲಿದ್ದಾರೆ ಎಂದರು.
ಬೆಳಗ್ಗೆ ೯.೩೦ಕ್ಕೆ ದಾವಣಗೆರೆಯ ಗಾಂಧಿ ವೃತ್ತದಿಂದ ಮಲ್ಲಿಕಾರ್ಜುನ ಕಲ್ಯಾಣ ಮಂದಿರದವರೆಗೂ ಆದಿವಾಸಿ ಕಲಾತಂಡಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಮೂಲ ಆದಿವಾಸಿ ಗಳು,ಮುಖಂಡರೊAದಿಗೆ ವೈಭವಯುತ ಕಲಾ ಮೇಳ ಮೆರವಣಿಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಗೌಡ, ಮಡೆನೆರಳು ಶಂಕರ್, ಮೂಡಿಗೆರೆ ಲ್ಯಾಂಪ್ಸ್ ಅಧ್ಯಕ್ಷ ವಿಜಯೇಂದ್ರ, ಡೋಂಗ್ರಿ ಗರಾಸಿಯ ಸಮುದಾಯದ ಮುಖಂಡ ಶಿವಾಜಿ, ಜಿಲ್ಲಾ ಸಮಿತಿ ಸದಸ್ಯರಾದ ಮಹೇಶ್ ಮೇದಾರ್, ರಮೇಶ್ ಉಪಸ್ಥಿತರಿದ್ದರು.