

ಮಂಡ್ಯ: ಯಾವುದೇ ಅಪೇಕ್ಷೆ ಇಲ್ಲದೆ ಸಮಾಜದ ಕೆಳಮಟ್ಟದಲ್ಲಿರುವ ವ್ಯಕ್ತಿಗಳಿಗೆ ಸರ್ಕಾರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ‘ವಿಶ್ವ ಸುಲಭ ಲಭ್ಯತೆಯ ಜಾಗೃತಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲರಿಗೆ 2016ರ ಕಾಯ್ದೆ ಅಡಿ ಸೌಲಭ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನರಲ್ಲಿ ವಿಶ್ವಾಸ, ಭರವಸೆ ಮೂಡಿಸಲು ಬದುಕಲು ಬೇಕಾದ ಸೌಲಭ್ಯವನ್ನು ಈ ಕಾಯ್ದೆ ಅಡಿ ನೀಡಲಾಗುತ್ತಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಂಕಲ್ಪ ಎನ್ನುವುದು ಮುಖ್ಯವಾಗಿದೆ. ಒಳ್ಳೆಯ ಸಂಕಲ್ಪ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದರು.
ಬೆಂಗಳೂರಿನ ಎಪಿಡಿ ಸಂಸ್ಥೆಯ ಯೋಜನಾ ಮುಖ್ಯಸ್ಥೆ ವಿಜಯಲಕ್ಷ್ಮೀ, ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ(ಫೇವಾರ್ಡ್) ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು, ಜಿಲ್ಲಾಧ್ಯಕ್ಷ ಡಾ.ನಾಗಪ್ಪ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರೋಹಿತ್, ಫೇವಾರ್ಡ್ ಜಿಲ್ಲಾ ಕಾರ್ಯದರ್ಶಿ ಕಾರಸವಾಡಿ ಮಹದೇವು, ದೇವರಾಜು ಕೊಪ್ಪ ಇತರರಿದ್ದರು.