ನಾಳೆ ಕಣಚೂರು ಆಸ್ಪತ್ರೆಯಲ್ಲಿ ಕಾರ್ಯಾಗಾರ

Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಚಿಕಿತ್ಸಾ ವಿಭಾಗದಿಂದ ಕರಾವಳಿ ಶಿಶು ಗ್ಯಾಸ್ಟ್ರೋ ಎಂಟರೋಲಜಿಯ ಪ್ರಸ್ತುತ ಸ್ಥಿತಿಯ ಕುರಿತು ಶಿಶು ಗ್ಯಾಸ್ಟ್ರೋ ಎಂಟರೋಲಜಿಯ ನಿರಂತರ ವೈದ್ಯಕೀಯ ಶಿಕ್ಷಣ-2024 ಕಾರ್ಯಾಗಾರ ಅ.26ರಂದು ಕಣಚೂರು ವೈದ್ಯಕೀಯ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮಕ್ಕಳ ತಜ್ಞ ಹಾಗೂ ನವಜಾತ ಶಿಶು ಗ್ಯಾಸ್ಟ್ರೋ ಎಂಟರೋಲಜಿಸ್ಟ್ ಡಾ.ಗೌತಮ್ ಪೈ ತಿಳಿಸಿದರು.

ಕಣಚೂರು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ.ಯು.ಕೆ.ಮೋನು ಮತ್ತು ನಿರ್ದೇಶಕ ಅಬ್ದುರಹಿಮಾನ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಮಕ್ಕಳ ಕರುಳು ಮತ್ತು ವಿವಿಧ ರೀತಿಯ ಕಾಯಿಲೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಶಿಶು ಗ್ಯಾಸ್ಟ್ರೋ ಎಂಟರೋಲಜಿಯ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಿರ್ಲಕ್ಷೃವನ್ನು ಪರಿಹರಿಸುವ ಪ್ರಯತ್ನ ಕಾರ್ಯಾಗಾರದ ಮೂಲಕ ಮಾಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಾಗಾರದಲ್ಲಿ ಕ್ಯಾಲಿಕಟ್‌ನ ಡಾ.ರಿಯಾಜ್, ಚೆನ್ನೈನ ಡಾ.ಸೋಮಶೇಖರ್, ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಬಿ.ಎಸ್.ಪ್ರಸಾದ್, ಕಣಚೂರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಗೌತಮ್ ಪೈ, ಡಾ.ವಿಜಯ್ ಮಹಂತೇಶ ಮತ್ತು ಬೆಂಗಳೂರು ಅಪೋಲೊ ಆಸ್ಪತ್ರೆಯ ಡಾ.ಸಂದೀಪ್ ಸತ್ಸಂಗಿ ಹಾಗೂ ದಕ್ಷಿಣ ಭಾರತದ ಪ್ರಮುಖ ವೈದ್ಯರು ಭಾಗವಹಿಸಲಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ವಿಶೇಷ ಮತ್ತು ಮಹತ್ವದ ಕಾರ್ಯಾಗಾರ ಇದಾಗಿದ್ದು, ಶಿಶುಗಳಲ್ಲಿ ಹೆಪಟೈಟಿಸ್, ಯಕೃತ್ತಿನ ರೋಗಗಳು, ವಾಂತಿ, ಬ್ಲಾಕ್ ಆದ ಯಕೃತ್ ಮಾರ್ಗ, ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂಶಾದ್ ಎ.ಖಾನ್, ಡಾ.ಒನಿಲ್ ಫರ್ನಾಂಡಿಸ್, ಸಹಾಯಕ ಪ್ರಾಧ್ಯಾಪಕ ಡಾ.ನಜಾಹ್ ಅಬ್ದುರ್ರಹಮಾನ್, ಡಾ.ಅತುಲ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net