

ರಾಯಚೂರು ಪರಿಸರಕ್ಕೆ ಹಾನಿಕಾರಿಯಾಗಿರುವ ಪಿಓಪಿ ಮೂರ್ತಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸೇರಿ ಮಹಾನಗರ ಪಾಲಿಕೆ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸುವ ಕಾರ್ಯ ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮಹಾನಗರ ಪಾಲಿಕೆ ಮತ್ತು ಗ್ರೀನ್ ರಾಯಚೂರ ಸಹಯೋಗದಲ್ಲಿ ಯೂಥ್ ಫಾರ್ ಸಿಟಿ, ಸಿಟಿ ಫಾರ್ ಯೂಥ್ ಘೋಷಣೆಯೊಂದಿಗೆ ಮಣ್ಣಿನ ಗಣಪತಿ ಸಿದ್ದಪಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನೀರಿನಲ್ಲಿ ಕರಗದೇ ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಓಪಿ ಗಣೇಶಗಳನ್ನು ನಿಯಂತ್ರಿಸಲು ಮಕ್ಕಳಿಗೆ ಗಣೇಶ ಮೂರ್ತಿ ಸಿದ್ದಪಡಿಸುವ ಕಾರ್ಯಗಾರ ಆಯೋಜಿಸುವ ಮೂಲಕ ಬದಲಾವಣೆಗೆ ಮಹಾನಗರ ಪಾಲಿಕೆ ಕಾರಣವಾಗಿದೆ.
ಸಾರ್ವಜನಿಕರು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಪರಿಸರ ಉಳಿಸುವ ಕೆಲಸಕ್ಕೆ ಕೈ ಜೋಡಿಸಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಮನೆ ಮನೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕೆಲಸ ನಡೆಯಲಿ ಎಂದರು.
ಪಾಲಿಕೆ ಸದಸ್ಯ ಜಯಣ್ಣ ಮಾತನಾಡಿ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಮಾಡುವದೊಂದು ಸವಾಲಾಗಿ ಪರಿಣಮಿಸಿದೆ. ಪಿಓಪಿ ಗಣೇಶ ಮೂರ್ತಿಯನ್ನು ತಡೆದು ಮಣ್ಣಿನ ಗಣೇಶ ಬಳಸುವ ಕಾರ್ಯಕ್ಕೆ ಪಾಲಿಕೆ ಆಯುಕ್ತರು ಹೊಸತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಎಳೆ ಮಕ್ಕಳಲ್ಲಿ ಮಣ್ಣಿನ ಗಣೇಶ ಸಿದ್ದಪಡಿಸುವ ಕಲೆಯನ್ನು ಬೆಳಸುವ ಜೊತೆಗೆ ಮಣ್ಣಿನಲ್ಲಿ ಬೀಜಗಳನ್ನು ಹಾಕಿ ಪರಿಸರ ಉಳಿಸುವ ಪ್ರಯೋಗ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅವಧಿಗೆ ಮುಂಚಿತವಾಗಿ ಯೇ ಮಣ್ಣಿನ ಗಣೇಶ ಸಿದ್ದಪಡಿಸುವ ಕೆಲಸ ನಡೆದು ಮಣ್ಣಿನ ಮಹತ್ವ ಸಾರುವ ಕೆಲಸವಾಗಲಿ, ಮಣ್ಣಿನಲ್ಲಿ ದೇವರನ್ನು ಕಾಣುವ ಕೆಲಸವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಿಗಿರಿ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ನರಸಿಂಹಲು ಮಾಡಗಿರಿ, ಗ್ರೀನ್ ರಾಯಚೂರಿನ ಸ್ವರಸ್ವತಿ ಕಿಲಕಿಲೆ, ರಾಜೇಂದ್ರ ಶಿವಾಳೆ, ಉಪಾ ಆಯುಕ್ತ ಸಂತೋಷರಾಣಿ, ಜೈಪಾಲರೆಡ್ಡಿ ಸೇರಿದಂತೆ ಅನೇಕರು ಇದ್ದರು.