ಆಹಾರ ಸಂಸ್ಕರಣಾ ಉದ್ದಿಮೆಯಿಂದ ಆದಾಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Workshop to create awareness about small food processing enterprises Mandya
Published on

ಮಂಡ್ಯ: ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಪ್ರತಿ ತಿಂಗಳಿಗೆ ಕನಿಷ್ಟ 50 ಸಾವಿರ ರೂನಿಂದ 1 ಲಕ್ಷ ರೂವರೆಗೂ ಆದಾಯ ಗಳಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಪ್ರಧಾನ ಮಂತ್ರಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಯಾವುದೇ ಕಾರಣಕ್ಕೂ ಕೃಷಿಯಿಂದ ಹಿಂತಿರುಗಬೇಡಿ. ಹಳೆಯ ಪದ್ಧತಿ ತೊರೆದು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಬಲಾಢ್ಯರಾಗಬಹುದು. ಸಮಗ್ರ ಕೃಷಿ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಿಂದ ಉತ್ತಮ ಲಾಭಗಳಿಸಬಹುದು. ರೈತರು ಹಳೆಯ ಪದ್ಧತಿಯಲ್ಲೇ ಕೃಷಿ ಮಾಡದೆ ಒಂದು ಎಕರೆಯಲ್ಲಾದರೂ ಸಮಗ್ರ ಕೃಷಿ ಮಾಡಿ. ವರ್ಷದಿಂದ ವರ್ಷಕ್ಕೆ ಬೆಳೆ ಬದಲಾವಣೆ ಮಾಡಿದರೆ ಇಳುವರಿ ಹೆಚ್ಚಾಗುವುದರ ಜತೆಗೆ ಖರ್ಚು ಸಹ ಕಡಿಮೆಯಾಗಲಿದೆ. ಕೃಷಿ ಇಲಾಖೆಯಲ್ಲಿ ಶೇ.57ರಷ್ಟು ಉದ್ಯೋಗ ಖಾಲಿ ಇದ್ದರೂ ಇದನ್ನು ಗಣನೆಗೆ ತೆಗೆದುಕೊಳ್ಳದೆ ರೈತರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಕೃಷಿ ಮತ್ತು ಕೃಷಿ ಸಂಶೋಧನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದನ್ನ ಸ್ವತಃ ಕೇಂದ್ರ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರೇ ರಾಜ್ಯಕ್ಕೆ ಬಂದಿದ್ದಾಗ ಮತ್ತು ತಮಿಳುನಾಡಿನಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಎಲ್ಲ ರೀತಿಯ ಸೌಲಭ್ಯ ನೀಡಲು ನಿರ್ಧರಿಸಿದೆ. 1 ಕೋಟಿ ರೂ ಸಾಲ ಪಡೆದರೆ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು. ಇದರಲ್ಲಿ ಕೇಂದ್ರ ಶೇ.40ರಷ್ಟು ನೀಡಿದರೆ, ರಾಜ್ಯ ಸರ್ಕಾರ ಶೇ.60ರಷ್ಟು ಸಬ್ಸಿಡಿ ನೀಡಲಿದೆ. ರಾಜ್ಯ ಸರ್ಕಾರವೇ ಹೆಚ್ಚು ಹಣ ವ್ಯಯಿಸಲಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಕೆಲವರು ಸುಮ್ಮನೆ ಆರೋಪ ಮಾಡುತ್ತಾರೆ. ಪ್ರಸ್ತುತ ಕೇಂದ್ರದ ಆರ್ಥಿಕ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದರು.

ವಿದ್ಯಾಭ್ಯಾಸಕ್ಕೂ ಉದ್ಯೋಗಕ್ಕೂ ಸಂಬಂಧವಿಲ್ಲ. ಜ್ಞಾನ ಮತ್ತು ಪ್ರಪಂಚದ ಆಗು-ಹೋಗುಗಳ ಬಗ್ಗೆ ತಿಳಿಯಲು ವಿದ್ಯೆ ಬೇಕು. ಉದ್ಯೋಗ ಜೀವನ ನಡೆಸಲು ಬೇಕಾಗಿದೆ. ಸಾಮಾನ್ಯ ರೈತ ಮತ್ತು ವಿದ್ಯಾವಂತ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಬಹಳ ವ್ಯತ್ಯಾಸವಿದೆ. ಆದ್ದರಿಂದ ವಿದ್ಯಾವಂತರಾದವರು ಉದ್ಯೋಗವನ್ನು ಹರಸಿ ದೂರದ ನಗರಗಳಿಗೆ ಅಲೆಯದೆ ಸಮಗ್ರ ಕೃಷಿಯಲ್ಲಿ ತೊಡಗಿದರೆ ಆರ್ಥಿಕವಾಗಿ ಮುಂದೆ ಬರಬಹುದು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮಂಡ್ಯ ಕೃಷಿ ಆಧಾರಿತ ಜಿಲ್ಲೆ. ಆದರೂ ಕೃಷಿಯಿಂದ ಜಿಲ್ಲೆಯ ರೈತರು ಗಳಿಸುತ್ತಿರುವ ಆದಾಯ ತೃಪ್ತಿಕರವಾಗಿಲ್ಲ. ಭತ್ತ, ಕಬ್ಬು, ತೆಂಗು ಮೂರು ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಕೃಷಿ ಪದ್ಧತಿಯಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಂಡು ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಬಹುದು. ಜಿಲ್ಲೆಯ ಮಣ್ಣಿನ ಗುಣಮಟ್ಟ ಮತ್ತು ಹವಾಮಾನಕ್ಕೆ ಸರಿ ಹೊಂದುವ ಬೆಳೆಗಳನ್ನು ಬೆಳೆಯಿರಿ. ಬೆಣ್ಣೆ ಹಣ್ಣು ಬೆಳೆಯಲು ನಮ್ಮ ಜಿಲ್ಲೆಯ ಹವಾಮಾನ ಸೂಕ್ತವಾಗಿದೆ. ಬೆಣ್ಣೆ ಹಣ್ಣಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಅರ್ಥ ಮಾಡಿಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ತಿಳಿಸಿದರು.

ನಮ್ಮ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಕೃಷಿ ಇಲಾಖೆಯ ಸಹಾಯದ ಮೂಲಕ ಸಂಸ್ಕರಿಸಿದ ಅಹಾರ ಪದಾರ್ಥಗಳನ್ನು ಮಾರಾಟ ಮಾಡಿದರೆ ತಮ್ಮ ಬೆಳೆಗೆ ಉತ್ತಮ ಬೆಲೆ ಕಾಣಬಹುದು. ನಾವು ಬೆಳೆದ ಬೆಳೆಯನ್ನು ನಾವೇ ಸಂಸ್ಕರಿಸಿ ಕಚ್ಚಾ ವಸ್ತುವನ್ನು ಸಿದ್ಧವಸ್ತು ಮಾಡಿ ಮಾರಾಟ ಮಾಡಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಲಾಭ ಗಳಿಸಬಹುದು. ನಮ್ಮಲ್ಲಿರುವ ಮಾರುಕಟ್ಟೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ದೇಶ ವಿದೇಶಗಳಲ್ಲಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸಬಹುದು. ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಬೇಕು. ಆಧುನಿಕ ಯುಗದಲ್ಲಿ ಎಲ್ಲರೂ ರೆಡಿಮೇಡ್ ಫುಡ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ರೈತರು ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಆಹಾರ ಸಂಸ್ಕರಣಾ ಉದ್ದಿಮೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಜಗತ್ತಿನ ತಾಂತ್ರಿಕ ಬದಲಾವಣೆಯೊಂದಿಗೆ ನಾವು ನಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಂಡು ಮುಂದೆ ಸಾಗಬೇಕು. ಇಲ್ಲವಾದರೆ ಹಿಂದೆ ಉಳಿದುಕೊಳ್ಳಬೇಕಾಗುತ್ತದೆ. ಹೊಸತನಕ್ಕೆ ನಾವೀನ್ಯತೆಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ನಮಗೆ ಆಹಾರ ಸಂಸ್ಕರಣಾ ಉದ್ದಿಮೆ ಹೊಸದಲ್ಲ. ನಮ್ಮ ಪೂರ್ವಜರು ಇದನ್ನು ಮಾಡುತ್ತಿದ್ದರು. ಆದರೆ ಕಾಲಾಂತರದಿಂದಾಗಿ ಆಹಾರ ಸಂಸ್ಕರಣೆಯ ಕುರಿತಾಗಿ ಇಂದಿನ ಪೀಳಿಗೆ ಆಸಕ್ತಿ ಕಳೆದುಕೊಂಡಿದೆ. ನಮ್ಮ ಪ್ರಾಂತ್ಯದಲ್ಲಿ ಬೆಳೆಯಬಹುದಾದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಸಂಸ್ಕರಣೆ ಮತ್ತು ಬ್ರಾಂಡಿಂಗ್ ಮಾಡುವುದರ ಮೂಲಕ ಮಾರಾಟ ಮಾಡಿದರೆ ಹೆಚ್ಚಿನ ಮಟ್ಟದಲ್ಲಿ ಲಾಭ ಕಾಣಬಹುದಾಗಿದೆ ಎಂದರು.

ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್‌ಗೌಡ, ರೈತ ಉತ್ಪಾದಕ ಸಂಸ್ಥೆಗಳು ಸಹಕಾರ ನಿಯಮಿತದ ನಿರ್ದೇಶಕ ರಾಜೇಶ್, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹಾದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net