ಸಾಗರದ ಗಣಿಗಾರಿಕೆ ಉತ್ಪಾದನಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ಕಾಂತರಾವ್ ಹೇಳಿಕೆ

mng-feb15-oceanpearl
Published on

ಮಂಗಳೂರು: ಭಾರತದ ವ್ಯಾಪ್ತಿಯ ಸಾಗರದಲ್ಲಿ ಅಪಾರ ಪ್ರಮಾಣದಲ್ಲಿರುವ ಖನಿಜ ನಿಕ್ಷೇಪಗಳನ್ನು ಹೊರ ತೆಗೆದು ಉತ್ಪಾದನಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಮುಂದಾಗಬೇಕು ಎಂದು ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ಕಾಂತರಾವ್ ಹೇಳಿದ್ದಾರೆ.


ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಜಿಯೊಲಾಜಿಕಲ್ ಸರ್ವೇ ಆ್ ಇಂಡಿಯಾದ ಸಾಗರ ಮತ್ತು ಕರಾವಳಿ ಸಮೀಕ್ಷಾ ವಿಭಾಗದಿಂದ ಹಮ್ಮಿಕೊಳ್ಳಲಾದ ‘ಕಡಲಾಚೆಗಿನ ಅನ್ವೇಷಣೆಗಳು’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.


ಕಡಲಾಳದ ಗಣಿಗಾರಿಕೆಗಾಗಿ ಕಡಲಾಳ ಪ್ರದೇಶ ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆ 20 ವರ್ಷ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ ಬಳಕೆಯಾಗಿರಲಿಲ್ಲ, ಈಗ ಅಗತ್ಯವಾದ ಪರಿಷ್ಕರಣೆ ಮಾಡಿಕೊಳ್ಳಲಾಗಿದೆ ಎಂದರು.


ಭಾರತದ ಭೂಭಾಗದಲ್ಲಿ 3000ಕ್ಕೂ ಅಧಿಕ ಬೃಹತ್ ಗಣಿಗಳು, 30 ಸಾವಿರಷ್ಟು ಸಣ್ಣ ಗಣಿಗಳು ಕಾರ್ಯವೆಸಗುತ್ತಿವೆ. ಭಾರತಕ್ಕೆ 20 ಲಕ್ಷ ಚದರ ಕಿ.ಮೀನಷ್ಟು ವಿಶಾಲವಾದ ಎಕ್ಸ್‌ಕ್ಲೂಸಿವ್ ಇಕನಾಮಿಕ್ ರೆನ್ ಇದ್ದು, ಇದರಲ್ಲಿ ಖನಿಜ, ನಿರ್ಮಾಣಯೋಗ್ಯ ಮರಳು ಲಭ್ಯವಿದೆ. ಕಳೆದ 40 ವರ್ಷಗಳಿಂದ ಜಿಎಸ್‌ಐ ಈ ನಿಟ್ಟಿನಲ್ಲಿ ಕಡಲಾಳದ ಅನ್ವೇಷಣೆ ನಡೆಸುತ್ತಿದೆ, ಈಗಾಗಲೇ 35ರಷ್ಟು ಖನಿಜದ ಬ್ಲಾಕ್‌ಗಳನ್ನು ಗುರುತಿಸಿ ಸರ್ಕಾರಕ್ಕೆ ನೀಡಿದೆ. ಪ್ರತಿ ವರ್ಷ ಇಂತಹ 4-5 ಬ್ಲಾಕ್‌ಗಳ ಅನ್ವೇಷಣೆ ನಡೆಯುತ್ತಿದೆ. ಈ ಬ್ಲಾಕ್‌ಗಳ ಸದ್ಬಳಕೆ ಮಾಡಿಕೊಳ್ಳಬೇಕು, ಅದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದರು.
ಕಡಲಾಳದ ಗಣಿಗಾರಿಕೆ ಎನ್ನುವುದು ಸರ್ಕಾರಕ್ಕೂ ಹೊಸ ವಿಷಯವಾಗಿದೆ, ಇದಕ್ಕೆ ಬೇಕಾದ ಕಾನೂನು, ನಿಯಮಾವಳಿ, ನಿರ್ವಹಣ ಮಾರ್ಗಸೂಚಿ ಇತ್ಯಾದಿಗಳನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ನಿರ್ಮಾಣ ಯೋಗ್ಯ ಮರಳು, ಲೈಮ್ ಮಡ್, ಖನಿಜಗಳ ನಿಕ್ಷೇಪ ಗುರುತಿಸಲಾಗಿದೆ. ಮೊದಲ ಕಡಲಾಳದ ಗಣಿಗಾರಿಕೆ ಗುತ್ತಿಗೆಯನ್ನು ಜೆಎನ್‌ಪಿಟಿ ಬಂದರಿಗೆ ನೀಡಲಾಗಿದೆ ಎಂದು ವಿವರಿಸಿದರು.


ಗಣಿಸಚಿವಾಲಯದ ನಿರ್ದೇಶಕ ಮುಸ್ತಾಕ್ ಅಹ್ಮದ್ ಅವರು ಕಡಲಾಳ ಪ್ರದೇಶ ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಮುಖ್ಯ ಅಂಶಗಳನ್ನು ವಿವರಿಸಿ, ಹಿಂದೆ ಕಾಯ್ದೆಯಲ್ಲಿ ಕಡಲಾಳದ ಗಣಿಗಳನ್ನು ಹರಾಜು ಮಾಡುವುದಕ್ಕೆ ಅವಕಾಶ ಇರಲಿಲ್ಲ, ಈಗ ಅದಕ್ಕೆ ಪೂರಕ ತಿದ್ದುಪಡಿ ತರಲಾಗಿದೆ, ಈ ಮೂಲಕ ಕಡಲಾಳದ ಖನಿಜ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.


ಜಿಎಸ್‌ಐ ಮಹಾನಿರ್ದೇಶಕ ಜನಾರ್ದನ್ ಪ್ರಸಾದ್, ಉಪಮಹಾನಿರ್ದೇಶಕ ಬಸಬ್ ಮುಖ್ಯೋಪಾಧ್ಯಾಯ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net