

ಮೈಸೂರು: ಮಹಿಳೆಯರ ಅಭಿವೃದ್ಧಿ ಇಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಇಂದುಮತಿ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸ್‌ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ವಿಭಾಗದಿಂದ ‘ಮಹಿಳೆಯರ ಆರೋಗ್ಯ ಮತ್ತು ಸ್ವಚ್ಚತೆ’ ವಿಷಯದ ಕುರಿತು ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎಲ್ಲಿ ಮಹಿಳೆಯರನ್ನು ಗೌರವಿಸುವುದಿಲ್ಲವೊ ಆ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಮಗುವಿನ ಬೆಳವಣಿಗೆ ಮತ್ತು ಸಂಸ್ಕೃತಿಯಲ್ಲಿ ಮಹಿಳೆಯ ಪಾತ್ರ ಹಿರಿದು. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಹಿಳೆಯರು ವಿದ್ಯಾವಂತರಾದರೆ ಆರೋಗ್ಯದ ಬಗ್ಗೆ ಅರಿವು ಉಂಟಾಗುತ್ತದೆ. ನಮ್ಮ ದೇಶದ ಮಹಿಳೆಯರಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಬೇಕಿದೆ. ಉತ್ತಮ ಆಹಾರ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಲೈಂಗಿಕ ಶಾಸ್ತ್ರಜ್ಞ ಡಾ.ಸಿ. ಶರತ್ ಕುಮಾರ್ ‘ಮಹಿಳೆಯರ ಲೈಂಗಿಕ ಆರೋಗ್ಯ’ ವಿಷಯ ಕುರಿತು ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಲೈಂಗಿಕ ಆರೋಗ್ಯವು ಸ್ವಾಭಿಮಾನ, ವೈಯಕ್ತಿಕ ಆಕರ್ಷಣೆ ಮತ್ತು ಸಾಮರ್ಥ್ಯವಾಗಿದೆ. ಇದರ ಬಗ್ಗೆ ಮಡಿವಂತಿಕೆ ಬಿಟ್ಟು ತಿಳುವಳಿಕೆ ಹೊಂದುವುದು ಹಲವು ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಲೈಂಗಿಕ ಆರೋಗ್ಯವು ಮನುಷ್ಯನ ಧನಾತ್ಮಕ ಶಕ್ತಿಯಾಗಿ ದೃಢೀಕರಿಸುತ್ತದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಶಿಕ್ಷಣ ಪಡೆದುಕೊಂಡಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ. ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಉತ್ತಮ ಆಹಾರ ಸೇವನೆ ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ರೇಚಣ್ಣ, ರೇಂಜರ್ಸ್ ಅಂಡ್ ರೋವರ್ಸ್ ಲೀಡರ್‌ಗಳಾದ ಡಾ.ಎಸ್. ಚೈತ್ರಾ.ಡಿ.ಜಿ. ಪಲ್ಲವಿ ಹಾಗೂ ಇತರರು ಇದ್ದರು. ನಂತರ ನಡೆದ ಗೋಷ್ಠಿಯಲ್ಲಿ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಕೆ. ಸೌಮ್ಯ ‘ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ’ ವಿಷಯದ ಕುರಿತು ಮಾಹಿತಿ ನೀಡಿದರು. ‘ಆಹಾರ ಮತ್ತು ಪೋಷಣೆ’ ವಿಷಯ ಕುರಿತು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಆಹಾರತಜ್ಞ ಡಾ.ಪಿ.ಪೃಥ್ವಿ ಅರಿವು ಮೂಡಿಸಿದರು. ‘ಮಾನಸಿಕ ಆರೋಗ್ಯ’ ವಿಷಯದ ಕುರಿತು ಮೈಸೂರು ವೈದ್ಯಕೀಯ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎನ್.ರವೀಶ್ ಮಾತನಾಡಿದರು.