ಗಿಡ ನೆಟ್ಟು ಸಂರಕ್ಷಣೆ ಮಾಡಲಿ: ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಸಲಹೆ

Workshop on State Climate Action Mandya
Published on

ಮಂಡ್ಯ: ಪರಿಸರವನ್ನು ಉಳಿಸಲು ಕೇವಲ ಪರಿಸರ ದಿನಾಚರಣೆಯಂದು ಗಿಡ ನೆಟ್ಟರೆ ಸಾಲದು. ಬದಲಿಗೆ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಆಡಳಿತ) ಪಿ.ಲಕ್ಷ್ಮೀ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ರಾಜ್ಯ ಹವಾಮಾನ ಕ್ರಮದ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹವಾಮಾನ ವೈಪರೀತ್ಯದಿಂದ ಪ್ರಕೃತಿ ಅವನತಿಯತ್ತ ಸಾಗುತ್ತಿದೆ. ಪ್ರಕೃತಿಯನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದು. ಐಷಾರಾಮಿ ಜೀವನ ಸಾಗಿಸಲು ಅನೇಕ ರೀತಿಯಲ್ಲಿ ಪ್ರಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದೇವೆ. ಫ್ರಿಡ್ಜ್, ಏರ್‌ಕೂಲರ್‌ನಂತಹ ಮುಂತಾದ ಉಪಕರಣಗಳು ಹೊರಸೂಸುವ ವಿಷಕಾರಿ ಅನಿಲವು ಓಜೋನ್ ಪದರವನ್ನು ಹಾಳು ಮಾಡುತ್ತಿದೆ. ಆದ್ದರಿಂದ ಇಂತಹ ಉಪಕರಣಗಳನ್ನು ಸರಿಯಾದ ವಿಧಾನದ ಮೂಲಕ ಬಳಸಬೇಕು ಎಂದು ಸಲಹೆ ನೀಡಿದರು.

ಪರಿಸರವನ್ನು ಉತ್ತಮವಾಗಿ ಬೆಳೆಸುವುದರ ಜತೆಗೆ ಉಳಿಸಿ ಸಂರಕ್ಷಿಸಬೇಕಾಗಿದೆ. ಪ್ಲಾಸ್ಟಿಕ್ ಮುಕ್ತವಾಗಿದ್ದರೂ ದಿನನಿತ್ಯ ಜೀವನದಲ್ಲಿ ಬಳಕೆಯಾಗುತ್ತಿದೆ. ಪ್ಲಾಸ್ಟಿಕ್‌ಗಳನ್ನು ಹೆಚ್ಚಾಗಿ ಬಳಸಬೇಡಿ, ಒಂದು ವೇಳೆ ಬಳಸಿದರೂ ಸಹ ಅದನ್ನು ಸುಡಬೇಡಿ. ಬದಲಾಗಿ ಅದನ್ನು ಮರುಬಳಕೆಗೆ ಒಳಪಡಿಸಿ ಬಳಕೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕು. ಕಚೇರಿಗಳಲ್ಲಿ ಫ್ಯಾನ್, ಎ.ಸಿ ಗಳನ್ನು ವ್ಯರ್ಥವಾಗಿ ಬಳಸಬೇಡಿ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಪರಿಸರವನ್ನು ಉಳಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಅನುಸರಿಸಬೇಕು ಎಂದು ಹೇಳಿದರು.

ಜಿಪಂ ಯೋಜನಾಧಿಕಾರಿ ಧನುಷ್ ಮಾತನಾಡಿ, ಗಿಡ ನೆಡುವುದರ ಜತೆಗೆ ಅವುಗಳ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿಯದೇ ಗಿಡ ಮರಗಳಿರುವ ಸುಸಜ್ಜಿತ ಪ್ರದೇಶವನ್ನು ಹಾಳು ಮಾಡುತ್ತಿದ್ದಾರೆ. ಪರಿಸರವನ್ನು ಹಾಳು ಮಾಡದಂತೆ ಕಾಪಾಡಲು ಜಾಗೃತಿ ಮೂಡಿಸಬೇಕಿದೆ. ಸುತ್ತಲಿನ ಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಎಂ.ಬಾಬು, ಸಹಾಯಕ ಕಾರ್ಯದರ್ಶಿ ಚಂದ್ರು, ಇಸ್ರೋ ವಿಜ್ಞಾನಿ ಡಾ. ಜಗನ್ನಾಥ್, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಬಿ.ವಿ.ಶ್ರುತಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರದೀಪ್‌ಕುಮಾರ್, ರುಚಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net