ಡೆಂಘೆ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ

UDP-25-1-Seminar
ಉಡುಪಿಯಲ್ಲಿ ಆಯೋಜಿಸಿದ್ದ ಆರೋಗ್ಯ ಸಂವಾದದಲ್ಲಿ ಡಿಎಚ್​ಒ ಈಶ್ವರ್​ ಗಡಾದ್​ ಮಾತನಾಡಿದರು. ಡಾ. ಪ್ರಶಾಂತ್​ ಭಟ್​ ಇದ್ದರು.
Published on

ಡಿಎಚ್​ಒ ಡಾ.ಈಶ್ವರ್​ ಗಡಾದ್​ ಸಲಹೆ | ಸಾಂಕ್ರಾಮಿಕ ರೋಗಗಳ ತಡೆ ಸಂವಾದ

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಯೂ ಹೆಚ್ಚಿನ ಪ್ರಮಾಣದಲ್ಲಿದ್ದು, ಡೆಂಘೆ ಕಾಯಿಲೆ ನಿಯಂತ್ರಣ ಕಷ್ಟವಾಗುತ್ತಲಿದೆ. ಜನಸಮುದಾಯ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ಈ ಕಾಯಿಲೆಯನ್ನು ಹತೋಟಿಗೆ ತರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ್​ ಪಿ. ಗಡಾದ್​ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲಾ ಪರ್ತಕರ್ತರಿಗಾಗಿ ಉಡುಪಿ ಪ್ರೆಸ್​ಕ್ಲಬ್​ನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ತಡೆ ಕುರಿತು ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜ್ವರ ನಿರ್ಲಕ್ಷಿಸಬೇಡಿ

ಮಳೆಗಾಲವೂ ಆರಂಭವಾಗಿದ್ದು ಸೊಳ್ಳೆಗಳ ಸಂತಾನೋತ್ಪತ್ತಿಯ ಕಾಲವೂ ಆಗಿದೆ. ಈ ಸಂದರ್ಭದಲ್ಲಿ ಜ್ವರವೂ ಕಾಡುತ್ತದೆ. ಹೆಚ್ಚಿನ ಜನರು ಜ್ವರ ಬಂದಾಗ ಹತ್ತಿರದ ಔಷಧದ ಅಂಗಡಿಗೆ ತೆರಳಿ ಜ್ವರಕ್ಕೆ ಮಾತ್ರೆ ಕೊಡಿ ಎಂದು ಪಡೆದು ಸೇವಿಸುತ್ತಾರೆ. ಇದರಿಂದ ಜ್ವರ ಕಡಿಮೆಯಾದರೂ ಮತ್ತೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಮತ್ತೇನೋ ಔಷಧ ಸೇವಿಸಿ, ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಾರೆ, ಇದು ಸರಿಯಲ್ಲ. ಜ್ವರ ಬಂದಾಗ ನಿರ್ಲಕ್ಷ್ಯ ತೋರಬಾರದು. ಸಮೀಪದ ಆಸ್ಪತ್ರೆಗೆ ತೆರಳಿ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದರು.

ಸಾಂಕ್ರಾಮಿಕ ಕಾಯಿಲೆ

ಸಂವಾದದಲ್ಲಿ ಪಾಲ್ಗೊಂಡಿದ್ದ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್​ ಮಾತನಾಡಿ, ಈಡೀಸ್​ ಹಾಗೂ ಅನಾಫಿಲೀಸ್​ ಸೊಳ್ಳೆಯಿಂದ ಸಾಂಕ್ರಾಮಿಕ ಕಾಯಿಲೆ ಹರಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಸೊಳ್ಳೆ ಜನಿತ ಸಾಂಕ್ರಾಮಿಕ ಕಾಯಿಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆಯಾಗಿದೆ. ಬೇರೆ ಕಾಯಿಲೆಗಳಿಗೆ ಹೋಲಿಸಿದರೆ ಇದು ಅಪಾಯಕಾರಿಯಾಗಿದೆ. ನಮಗೆ ಅರಿವಿಲ್ಲದೆಯೇ ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದೇವೆ ಎಂದರು.

ರೋಗ ಹರಡುವ 4 ಕಾರಣ

ಮಲೇರಿಯಾ ಹಾಗೂ ಡೆಂಘೆ ಕಾಯಿಲೆಗಳು ವ್ಯಾಪವಾಗಿ ಹರಡಲು 4 ಪ್ರಮುಖ ಕಾರಣಗಳಿವೆ. ಮೊದಲನೇಯದಾಗಿ ವಲಸೆ ಕಾರ್ಮಿಕರು. ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಬಗೆಯ ನಿರ್ಮಾಣ ಹಾಗೂ ಕೈಗಾರಿಕಾ ಕೆಲಸಗಳಿಗಾಗಿ ಹೊರ ರಾಜ್ಯಗಳಾದ ಓಡಿಸ್ಸಾ, ಉ.ಪ್ರ., ಬಿಹಾರ್​, ಜಾರ್ಖಂಡ್​ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸುತ್ತಾರೆ. ಓಡಿಸ್ಸಾವಂತೂ ಮಲೇರಿಯಾ ರೋಗದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇವರಿಂದಾಗಿ ಸೊಳ್ಳೆಗಳ ಮೂಲಕ ರೋಗ ಇನ್ನಷ್ಟು ಪಸರಿಸುತ್ತಲಿದೆ. 2ನೇಯದಾಗಿ ಬೃಹತ್​ ಕಟ್ಟಡಗಳ ನಿರ್ಮಾಣ ಸ್ಥಳದಲ್ಲಿನ ಅಸ್ವಚ್ಛತೆ, 3ನೇಯದಾಗಿ, ಮೀನುಗಾರಿಕಾ ಪ್ರದೇಶ ಹಾಗೂ 4ನೇಯದಾಗಿ ಪ್ರವಾಸಿಗರು. ಉಡುಪಿ ಟೆಂಪಲ್​ ಸಿಟಿಯಾಗಿದ್ದರಿಂದ ದೇಶ-ವಿದೇಶಗಳಿಂದ ಯಾತ್ರಿಕರು ಬರುತ್ತಾರೆ. ಲಾಡ್ಜ್​, ಇನ್ನಿತರ ಕಡೆಗಳಲ್ಲಿ ವಸತಿ ಮಾಡಿ, ಸೊಳ್ಳೆ ಕಡಿತಕ್ಕೊಳಗಾಗಿ ಕಾಯಿಲೆಯ ಬೀಜ ಬಿತ್ತುತ್ತಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಡಾ. ಪ್ರಶಾಂತ್​ ಭಟ್​ ಸಮಗ್ರ ಮಾಹಿತಿ ನೀಡಿದರು.

ಸಮುದಾಯದ ಸಹಕಾರ ಅಗತ್ಯ

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯ ಇಲ್ಲ. ಡೆಂಘೆಯಂತಹ ಮಾರಕ ರೋಗ ಕಳೆದ ಐದು ವರ್ಷದಿಂದ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ರೋಗ ತಡೆಗೆ ಜನಸಮುದಾಯದ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯ. ಬಿಲ್ಡರ್ಸ್​ಗಳು ಹೊರ ರಾಜ್ಯದಿಂದ ಕರೆ ತರುವ ಕಾರ್ಮಿಕರನ್ನು ಒಮ್ಮೆ ಸ್ಕ್ರೀನಿಂಗ್​ಗೆ ಒಳಪಡಿಸಿಯೇ ಕೆಲಸಕ್ಕೆ ಬಳಸಿಕೊಳ್ಳುವಂತಾಗಬೇಕು. ಹೊರ ರಾಜ್ಯದವರಿಗೆ ಮನೆ ಬಾಡಿಗೆ ಕೊಡುವಾಗಲೂ ಅವರನ್ನು ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಉಡುಪಿ ಜಿಲ್ಲೆಯ ಸಮಸ್ತ ಜನರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಯ ಸಂತಾನೋತ್ಪತ್ತಿಗೆ ಕಡಿವಾಣ ಹಾಕಬೇಕು. ರೋಗ ಬಂದ ಮೇಲೆ ಎಚ್ಚೆತ್ತುಕೊಳ್ಳುವ ಬದಲು, ಮೊದಲೇ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕೆಂದು ವೈದ್ಯಾಧಿಕಾರಿಗಳು ಸಂವಾದದಲ್ಲಿ ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net