ಮನರೇಗಾ ಕಾಮಗಾರಿಗಳ ಅನುಷ್ಟಾನ ಕುರಿತ ಕಾರ್ಯಾಗಾರ, ಜಿಯೋ ಫೆನ್ಸಿಂಗ್ ಮೊಬೈಲ್ ಆ್ಯಪ್ ಕಡ್ಡಾಯ ಎಂದ ಡಾ.ವಿಜಯಕುಮಾರ ಆಜೂರ

ZP NREG WORK SHOP
ವಿಜಯಪುರ ನಗರದ ಜಿಲ್ಲಾ ಪಂಚಾಯಿಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಪಂ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ ಉದ್ಘಾಟಿಸಿದರು. ಶಿವಶರಣ ವಂದಗನೂರ, ಇಂಡಿ ತಾಂತ್ರಿಕ ಸಹಾಯಕ ಈರಣ್ಣ ಮತ್ತಿತರರಿದ್ದಾರೆ.
Published on

ವಿಜಯಪುರ: ಮನರೇಗಾ ಯೋಜನೆಯ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡಲು ಕೇಂದ್ರ ಸರ್ಕಾರವು ಹೊಸ ವಿಧಾನವಾಗಿ ಜಿಯೋ ಫೆನ್ಸಿಂಗ್ ಮೊಬೈಲ್ ಆ್ಯಪ್ ಮೂಲಕ ಜಿಪಿಎಸ್ ಅವಕಾಶ ಕಲ್ಪಿಸಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಟಾನಗೊಳ್ಳುವ ಕಾಮಗಾರಿಗಳಿಗೆ ಜಿಯೋ ಫೆನ್ಸಿಂಗ್ ಆ್ಯಪ್ ಮೂಲಕ ಅದರ ಪ್ರಕ್ರಿಯೆಗಳ ಬಗ್ಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸೆ.1 ರಿಂದ ಈ ಹೊಸ ಮೊಬೈಲ್ ಆಪ್ ದೇಶಾದ್ಯಂತ ಕಾರ್ಯಾರಂಭ ಮಾಡಲಿದೆ. ಈ ಮೊದಲು ಕಾಮಗಾರಿ ಪೋಟೋವನ್ನು ಜಿಪಿಎಸ್ ಆಧಾರವಾಗಿಟ್ಟುಕೊಂಡು ಕೇವಲ ಒಂದು ಸ್ಥಳದಲ್ಲಿ ಜಿಯೋ ಟ್ಯಾಗ್ ಆ್ಯಪ್ ಮೂಲಕ ಮಾಡಲಾಗುತ್ತಿತ್ತು. ಪ್ರಸ್ತುತ ಹೊಸ ಆ್ಯಪ್ ಕಾಮಗಾರಿಯ ಸುತ್ತ 4 ದಿಕ್ಕುಗಳಲ್ಲಿ ಫೋಟೋ ಸಂಗ್ರಹ ಮಾಡಿಕೊಳ್ಳಬೇಕಾಗಿರುವದರಿಂದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಿದಂತಾಗುತ್ತಿದ್ದು, ಯೋಜನೆಯ ಫಲಾನುಭವಿಗಳು ಸಹ ಈ ಹೊಸ ಮಾದರಿಯ ಜಿಪಿಎಸ್ ಮಾಡಲು ಅಧಿಕಾರಿ-ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಬೇಕು. ಈ ವಿಷಯದಲ್ಲಿ ಫಲಾನುಭವಿಗಳು ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ, ಇಲ್ಲಿ ಜಿಪಿಎಸ್ ಮಾತ್ರ ಬದಲಾಗಿದ್ದು, ಉಳಿದ ಅಂಶಗಳಲ್ಲಿ ಯಾವುದೇ ಬದಲಾವಣೆಯಿರುವದಿಲ್ಲ ಎಂದು ಅವರು ಹೇಳಿದರು.

ಜಿಪಂ ಎಂಐಎಸ್ ಸಂಯೋಜಕಿ ಶಿಲ್ಪಾ ಗುತ್ತೇದಾರ, ಸಿಂದಗಿ ತಾಂತ್ರಿಕ ಸಂಯೋಜಕ ಶಿವಶರಣ ವಂದಗನೂರ, ಇಂಡಿ ತಾಂತ್ರಿಕ ಸಹಾಯಕ ಈರಣ್ಣ ತರಬೇತಿ ನೀಡಿದರು. ವಿವಿಧ ತಾಲೂಕುಗಳ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net