

ಮಡಿಕೇರಿ: ಕಾಫಿ ಮಂಡಳಿ ಮತ್ತು ಸುಕ್ಡೇನ್ ಕಾಫಿ ಪ್ರವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯತ್ ಮತ್ತು ಕಾರ್ಮಾಡು ಇಗ್ಗುತ್ತಪ್ಪ ಸಂಘದ ಸಹಯೋಗದಲ್ಲಿ ನಿಟ್ಟೂರು ಗ್ರಾ.ಪಂ ಸಭಾಂಗಣದಲ್ಲಿ ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಕಾರ್ಯಾಗಾರ ನಡೆಯಿತು.
ಗೊಣಿಕೊಪ್ಪಲು ಕಾಫಿಮಂಡಳಿಯ ಉಪನಿರ್ದೆಶಕ ಡಾ.ಕೆ.ಶ್ರೀದೇವಿ ಅಧ್ಯಕ್ಷತೆ ವಹಿಸಿ ಸುಸ್ಥಿರ ಕಾಫಿ ಉತ್ಪಾದನೆಯ ಮಹತ್ವದ ಬಗ್ಗೆ ವಿವರಿಸಿದರು.
ಸಾಂಬರು ಸಂಶೋಧನಾ ಉಪಕೇಂದ್ರ ಅಪ್ಪಂಗಳದ ಹಿರಿಯ ವಿಜ್ಞಾನಿ ಡಾ.ಅಂಕೇಗೌಡ ಮಾತನಾಡಿ, ಕರಿಮೆಣಸು ಮತ್ತು ಏಲಕ್ಕಿ ಕೃಷಿ ಬೇಸಾಯ ಕ್ರಮಗಳ ಬಗ್ಗೆ ಮತ್ತು ಇತ್ತೀಚಿನ ಹವಮಾನ ಬದಲಾವಣೆಗೆ ತಕ್ಕಂತೆ ಕರಿ ಮೆಣಸು ಮತ್ತು ಏಲಕ್ಕಿ ಕೃಷಿಕರು ಅನುಸರಿಸಬೇಕಾದ ಕೃಷಿ ಪದ್ದತಿಗಳ ವಿಚಾರವಾಗಿ ಮಾಹಿತಿ ನೀಡಿದರು.
ಕಾಫಿ ಸಂಸೋಧನಾ ಉಪಕೇಂದ್ರ ಚೆಟ್ಟಳ್ಳಿಯ ಮಣ್ಣು ವಿಜ್ಞಾನಿಗಳಾದ ಡಾ.ನಧಾಪ್ ಮಣ್ಣಿನ ಆರೋಗ್ಯ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಲಹೆಗಳನ್ನು ನೀಡಿದರು. ಗೊಣಿಕೊಪ್ಪಲು ಕಾಫಿ ಮಂಡಳಿಯ ತಳಿ ಅಭಿವೃದ್ಧಿ ಮತ್ತು ಅನುವಂಶೀಯ ಶಾಸ್ತ್ರ ವಿಜ್ಞನಿಗಳಾದ ಡಾ.ಚೇತನ್ ಕಾಫಿಯ ಹೊಸ ತಳಿಯ ಪ್ರಾಮುಖ್ಯತೆಯ ಬಗ್ಗೆ ವಿವರಣೆ ನೀಡಿದರು.
ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕ ಅಧಿಕಾರಿ ಡಿ.ಎಸ್.ಮುಖಾರೀಬ್ ರೋಬಸ್ಟಾ ಕಾಫಿ ತೋಟದಲ್ಲಿ ನೀರಿನ ಮಹತ್ವ ಮತ್ತು ನೀರಿನ ನಿರ್ವಾಹಣೆಯ ಬಗ್ಗೆ ವಿವರಣೆ ನೀಡಿ, ಕಾಫಿ ಮಂಡಳಿಯಿಂದ ಬಿಡುಗಡೆಗೊಳಿಸಲಾಗಿರುವ ಇಂಡಿಯಾ ಕಾಫಿ ಆ್ಯಪ್‌ನಲ್ಲಿ ಎಲ್ಲಾ ಕಾಫಿ ಬೆಳೆಗಾರರು ನೊಂದಾಯಿಸಿಕೋಳ್ಳಲು ಕರೆ ನೀಡಿದರು.
ಇಗ್ಗುತ್ತಪ್ಪ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಪ್ರೀನ್ಸ್ ಗಣಪತಿ, ಸುಕ್ಡೇನ್ ಕಾಫಿ ಪ್ರವೇಟ್ ಲಿಮಿಟೆಡ್ ವ್ಯವಸ್ಥಾಪಕಿ ಪ್ರಕೃತಿ ಪೊನ್ನಮ್ಮ, ನಿಟ್ಟೂರು ಗ್ರಾ.ಪಂ ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರುಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಇಗ್ಗುತ್ತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಸೋಮಯ್ಯ, ಮುಂತಾದವರು ಹಾಜರಿದ್ದರು. ಬಾಳೆಲೆ ಹೋಬಳಿ ವ್ಯಾಪ್ತಿಯ ೭೫ ಆಯ್ದ ಕಾಫಿ ಬೆಳೆಗಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ೪೪ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸಿಕೊಂಡರು.