ಕೃಷಿ ಚಟುವಟಿಕೆಯೂ ಲಾಭದಾಯಕ ಹುದ್ದೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Workshop on Agricultural Education Mandya
Published on

ಮಂಡ್ಯ: ಕೃಷಿ ಕೂಡ ಲಾಭದಾಯಕ ಹುದ್ದೆ. ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳ ಪಡೆಯುವುದರ ಬದಲು ಕೃಷಿಯಲ್ಲಿ ಉತ್ತಮ ಆದಾಯ ಪಡೆದು ಸದೃಢ ಆರ್ಥಿಕ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಆನೇಕ ನಿದರ್ಶನಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಲುಮ್ನಿ ಅಸೋಸಿಯೇಷನ್, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿ ಶಿಕ್ಷಣ ಮತ್ತು ಕೃಷಿ ಕ್ಷೇತ್ರದ ಅವಕಾಶಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ತಳಿಗಳ ಬಳಕೆ ಮಾಡಿಕೊಂಡು ಆಹಾರದ ಕೊರತೆಯನ್ನು ನೀಗಿಸಿ ಇಂದು ರಫ್ತು ಮಾಡುವ ಸ್ಥಿತಿಗೆ ನಮ್ಮ ದೇಶ ಬೆಳೆದಿದೆ. ಕೃಷಿ ಕ್ಷೇತ್ರದಲ್ಲೂ ಇಂದು ಅನೇಕ ಅವಕಾಶಗಳಿವೆ ಎಂದರು.

ಕೃಷಿ ಪಾರಂಪರಿಕವಾಗಿ ಬಂದಂತಹದ್ದು. ಅದಕ್ಕೆ ಶಿಕ್ಷಣದ ಅವಶ್ಯಕತೆಯಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುವುದು ಸಹಜ. ಆದರೆ ಕೃಷಿಯು ಎಲ್ಲರೂ ತಿಳಿದಷ್ಟು ಸುಲಭದ ಉದ್ಯೋಗವೇನು ಅಲ್ಲ. ರೈತ ವ್ಯವಸಾಯ ಮಾಡಬೇಕೆಂದರೆ ಅನೇಕ ಏರುಪೇರುಗಳನ್ನು ವಾತಾವರಣದಲ್ಲಿ ಕಾಣುತ್ತಾರೆ. ಇವುಗಳನ್ನು ನಿಭಾಯಿಸಲು ಕೃಷಿ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಕೃಷಿ ಪದವಿ ಹಾಗೂ ಡಿಪ್ಲೊಮಾ ಸೇರಿದಂತೆ ಇನ್ನಿತರೆ ಪದವಿ ಪ್ರವೇಶಾತಿಗೆ ಸುಮಾರು ಒಂದು ಲಕ್ಷ ಅರ್ಜಿ ಬಂದರೆ, 5 ಸಾವಿರ ಜನರಿಗೆ ಮಾತ್ರ ಪ್ರವೇಶಾತಿ ನೀಡಲು ಸಾಧ್ಯವಾಗುತ್ತಿತ್ತು. ಇದನ್ನು ಮನಗಂಡು ಹಿಂದಿನ ಸಾಲಿನಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ 2 ಖಾಸಗಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಟ್ಟಿ ಸಾಧನೆ ಮಾಡಲು ಶಿಸ್ತು ಹಾಗೂ ಜ್ಞಾನಾರ್ಜನೆ ಮುಖ್ಯ. ವಿದ್ಯಾರ್ಥಿಗಳು ತಮ್ಮ ಶಾಲಾ ಹಾಗೂ ಕಾಲೇಜು ಹಂತದಲ್ಲಿ ಹೆಚ್ಚಿನ ಶ್ರಮವಹಿಸಿದರೆ ಉನ್ನತ ಹುದ್ದೆಯನ್ನು ಅಲಂಕರಿಸುವುದರ ಜತೆಗೆ ತಮ್ಮ ಕುಟುಂಬ ಹಾಗೂ ದೇಶದ ಪ್ರಗತಿಗೆ ಕೈ ಜೋಡಿಸಬಹುದು. ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಬಹು ಮುಖ್ಯ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೇ.99 ಗಳಿಸಿದರೂ ಸಹ ಕಡಿಮೆ ಎಂಬ ಭಾವನೆ ಇದೆ. ಆದರಿಂದ ಸಮಯ ವ್ಯರ್ಥ ಮಾಡದೆ ಜ್ಞಾನವನ್ನು ಹೆಚ್ಚಿಸಿಕೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮುಂದಿನ ಜೀವನ ಸುಖಕರವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಶಾಸಕ ರವಿಕುಮಾರ್ ಗಣಿಗ, ಮುಡಾ ಅಧ್ಯಕ್ಷ ನಹೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ವಿ.ಸಿ ಫಾರ್ಮ್ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಪಿ.ಎನ್.ಫಾತಿಮಾ, ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಡಾ.ಎಚ್.ಎಲ್.ಹರೀಶ್, ಸದಸ್ಯ ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net