ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಕಾರ್ಯಾಗಾರ ಅಗತ್ಯ: ರಂಗತಜ್ಞ ಅರಸೀಕೆರೆ ಯೋಗಾನಂದ ಅಭಿಮತ

21
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜು, ಶ್ರೀಗುಬ್ಬಿ ವೀರಣ್ಣ ಪೀಠದಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರಿಗಾಗಿ ಒಂದು ದಿನದ ಪ್ರಸಾಧನ ಹಾಗೂ ಮುಖವಾಡ ತಯಾರಿಕಾ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಶ್ರೀಗುಬ್ಬಿ ವೀರಣ್ಣ ಪೀಠದ ರಂಗತಜ್ಞ ಅರಸೀಕೆರೆ ಯೋಗಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಇಂತಹ ಕಾರ್ಯಾಗಾರಗಳ ಅಗತ್ಯವಿದ್ದು, ಮುಂದೆ ಪ್ರತಿ ಶನಿವಾರ ಅಭಿನಯ, ವಾಚಿಕ, ರಂಗಸಂಗೀತ, ವಸ್ತ್ರಾಲಂಕಾರ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಕಾರ್ಯಾಗಾರ ನಡೆಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಅನಿಟಾ ವಿಮ್ಲಾ ಬ್ರಾಗ್ಸ್ ಮಾತನಾಡಿ, ಲಲಿತಕಲಾ ಕಾಲೇಜು 60ನೇ ವರ್ಷಕ್ಕೆ ಕಾಲಿಟ್ಟಿದ್ದು ವಜ್ರ ಮಹೋತ್ಸವದ ಸಂಭ್ರಮಾಚರಣೆಯಲ್ಲಿದೆ. ಲಲಿತಕಲೆಗಳಿಗೂ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.

ಓಪನ್ ಎಲೆಕ್ಟೀವ್‌ನ ಸ್ನಾತಕೋತ್ತರ ಹಾಗೂ ಸ್ನಾತಕಪೂರ್ವ ಅಧ್ಯಯನ ನಡೆಸುತ್ತಿರುವ ಸುಮಾರು 80 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ರಂಗಾಯಣದ ಹಿರಿಯ ಕಲಾವಿದ ಸಂತೋಷ್‌ಕುಮಾರ್ ಕುಸನೂರ ಅವರು ವಿವಿಧ ರೀತಿಯ ಮುಖವರ್ಣಿಕೆ ಮಾಡಿ ಪ್ರಾತ್ಯಕ್ಷಿಕೆ ತೋರಿಸಿದರು. ಅಲ್ಲದೆ ಕಾಗದ ಹಾಗೂ ಪಿಒಪಿಯಿಂದ ಮುಖವಾಡಗಳನ್ನು ಮಾಡುವ ವಿಧಾನ ಕಲಿಸಿಕೊಟ್ಟರು. ವಿಧ್ಯಾರ್ಥಿಗಳು ಸ್ವತಃ ಒಬ್ಬರಿಗೊಬ್ಬರು ಪ್ರಸಾಧನ ಮಾಡಿ ಸಂಭ್ರಮಿಸಿದರು.

ಹಲವು ವಿದ್ಯಾರ್ಥಿಗಳು ಮುಖವಾಡಗಳನ್ನು ತಯಾರಿಸಿ ಪ್ರದರ್ಶಿಸಿದರು. ಕಾಲೇಜಿನ ಅಧ್ಯಾಪಕರಾದ ಸುಬ್ಬುಲಕ್ಷ್ಮಿ, ಗೀತಾ, ಸೂರ್ಯಪ್ರಭ, ಮೇಘಾ ಸಮೀರ, ನಾಗೇಂದ್ರ, ರಂಗಕರ್ಮಿಗಳಾದ ಶ್ರೀನಿವಾಸ ಪಾಲಹಳ್ಳಿ, ಕೆಂಪರಾಜು, ನಿಂಗರಾಜ ಚಿತ್ತಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net