ಮಾಸ್ಟರ್ ತರಬೇತಿದಾರರಿಗೆ ಕಾರ್ಯಾಗಾರ ಸಮಾರೋಪ

20
Published on

ಮೈಸೂರು: ಆದಿ ಕರ್ಮಯೋಗಿ ಅಭಿಯಾನ ಒಂದು ನಿರಂತರ ಅಭಿಯಾನವಾಗಿದ್ದು, 3 ದಿನಗಳ ಕಾಲ ನಡೆದ ಈ ಕಾರ್ಯಾಗಾರ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಮಾಸ್ಟರ್ ತರಬೇತಿದಾರರಿಗೆ ಹಮ್ಮಿಕೊಂಡಿದ್ದ 3 ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಗುರುವಾರ ಮಾತನಾಡಿದರು.

ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆ ಬಂದರೂ ಅದರ ಅನುಷ್ಠಾನದ ಸಂಬಂಧ ಆದಿಕರ್ಮಯೋಗಿಗಳಾಗಿ ತರಬೇತಿ ಹೊಂದಿರುವ ವಿವಿಧ ಇಲಾಖೆಯ ಅಧಿಕಾರಿಗಳು ಯೋಜನೆಯ ಯಶಸ್ವಿಗೆ ಶ್ರಮಿಸಬೇಕು. ಅಲ್ಲದೇ ಸ್ಪಂದನಾಶೀಲ ಆಡಳಿತದತ್ತ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಮುಂದೆ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್ ಮಾತನಾಡಿ, ಜನಜಾತೀಯ ಉತ್ಕರ್ಷ ಗ್ರಾಮ ಅಭಿಯಾನ ಕಾರ್ಯಕ್ರಮದಡಿ ವಿವಿಧ ಇಲಾಖೆಗಳ ಮೂಲಕ ಗ್ರಾಮ ಮಟ್ಟದ ತಳಹಂತಕ್ಕೆ ಸರ್ಕಾರದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡುವ ಗುರಿಯನ್ನು ಆದಿಕರ್ಮಯೋಗಿ ಹೊಂದಿದೆ ಎಂದು ಹೇಳಿದರು.

ಆದ್ದರಿಂದ ಪರಸ್ಪರ ಹೊಂದಾಣಿಕೆಯಿಂದ ಸೌಹಾರ್ದಯುತವಾಗಿ ಎಲ್ಲರೂ ಸಾರ್ವಜನಿಕರ ಕೆಲಸ ಮಾಡೋಣ. ಈ ಕಾರ್ಯಾಗಾರದಿಂದ ನಾವೆಲ್ಲರೂ ಒತ್ತಡಗಳಿಂದ ಮುಕ್ತರಾಗಿದ್ದೇವೆ, ಈ ಕಾರ್ಯಾಗಾರ ಯಶಸ್ವಿಯಾಗಿದೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿಗಳಾದ ಅರುಣ್‌ಪ್ರಭು, ಜಿ.ಆರ್. ಮಹೇಶ್, ಕೋಮಲ, ಪದ್ಮಾವತಿ ಚಿಲ್ಲಾಳ್, ಅಕ್ಕಮಹಾದೇವಿ, ಚಂದ್ರಶೇಖರ್, ರಘುನಾಥ್, ಅಭಿಷೇಕ್, ಮಹೇಂದ್ರ, ಸೋಮಯ್ಯ, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net