ಸೈನಿಕರಿಗಿದೆ ಸಮಾಜದಲ್ಲಿ ಅಪಾರ ಗೌರವ : ಸೈಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿಕೆ

New Project (6)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಯಾವುದೇ ಕೆಲಸ ಆದರೂ ವೇತನಕ್ಕಾಗಿಯೇ ಮಾಡಲಾಗುತ್ತದೆ. ಸೈನ್ಯದಲ್ಲಿ ಸೇವೆ ಸಲ್ಲಿಸುವವರಿಗೆ ಸಮಾಜದಲ್ಲಿ ಸಿಗುವ ಸ್ಥಾನಮಾನ, ದೇಶ ಕಾಪಾಡುವ ಸುವರ್ಣಾವಕಾಶ, ಕುಟುಂಬಕ್ಕೆ ಸಿಗುವ ವಿಶೇಷ ಗೌರವ ಇನ್ಯಾವುದೇ ಕೆಲಸದಿಂದ ಸಿಗಲಸಾಧ್ಯ. ಜತೆಗೆ ಸ್ವರ್ಗವೂ ಸಿಗುತ್ತದೆ. ಇಂಥ ಅವಕಾಶ ಯಾವುದೇ ಕ್ಷೇತ್ರದಲ್ಲೂ ಸಿಗಲು ಅಸಾಧ್ಯ ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದರು.

ಇನೋಳಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿರುವ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಸಂಸ್ಥೆಯ ಆಶ್ರಯದಲ್ಲಿ ‘ಭಾರತೀಯ ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ’ ಕುರಿತು ದ.ಕ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಭಾನುವಾರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೈನ್ಯದಲ್ಲಿ ಕೆಲಸ ಮಾಡಿದವರ ಹೆಸರು ಮೊಮ್ಮಕ್ಕಳು, ಮರಿಮಕ್ಕಳ ಕಾಲದವರೆಗೂ ಉಳಿಯುತ್ತದೆ. ಅಲ್ಲದೆ ನಿವೃತ್ತಿಯ ಬಳಿಕವೂ ಇತರ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಸಿಗುತ್ತದೆ. ಪ್ರಸ್ತುತ ಉತ್ತರ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿದ್ದು, ದಕ್ಷಿಣ ಭಾರತದಲ್ಲಿ ಕೊಡಗಿನವರಿದ್ದಾರೆ. ಕರಾವಳಿ ಭಾಗದಲ್ಲಿ ನೂರು ಜನ ಸಿಗುವುದೂ ಕಷ್ಟ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ನೀಡುವುದು ಮುಖ್ಯ ಎಂದರು.

ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಸೇರ್ಪಡೆಗೆ ಅಗತ್ಯವಿರುವ ಎನ್‌ಡಿಎ, ಸಿಡಿಎಸ್, ಎಎಫ್ ಸಿಎಟಿ ಮುಂತಾದ ಪ್ರಮುಖ ರಕ್ಷಣಾ ಪ್ರವೇಶ ಪರೀಕ್ಷೆಗಳ ಅರ್ಹತಾ ಮಾನದಂಡಗಳು, ತಯಾರಿ ವಿಧಾನಗಳು ಹಾಗೂ ಮಾನಸಿಕ ದೃಢತೆ ಬಗ್ಗೆ ಮಾಹಿತಿ ನೀಡಲಾಯಿತು.

ಪುಣೆಯ ಅನೀಸ್ ಡಿಫೆನ್ಸ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕ ಅನೀಸ್ ಕುಟ್ಟಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಂಸ್ಥೆಯ ಹಳೇ ವಿದ್ಯಾರ್ಥಿ ಡಾ.ಸದಾಫ್ ಖಾನ್, ಬ್ಯಾರೀಸ್ ಇಂಟಗ್ರೆಡೆಟ್ ಪಿಯು ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್, ಕಾರ್ಯಕ್ರಮ ಸಂಯೋಜಕ ಪ್ರೊ.ಮೊಹಮ್ಮದ್ ಸಿನಾನ್ ಮೊದಲಾದವರು ಉಪಸ್ಥಿತರಿದ್ದರು. ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ.ಮಂಜುರ್ ಬಾಷಾ ಸ್ವಾಗತಿಸಿದರು. ಪ್ರೊ.ಜೈಸನ್ ಮಿರಾಂಡ ಕಾರ್ಯಕ್ರಮ ನಿರೂಪಿಸಿದರು.

ಭಾರತೀಯ ಸೇನೆಯಲ್ಲಿ ವಿವಿಧ ಪಡೆಗಳಲ್ಲಿ ಸೇವೆ ಸಲ್ಲಿಸಲು ಬಯಸುವ ಸ್ತ್ರೀ ಪುರುಷರಿಗೆ ಸಮಾನ ಅವಕಾಶಗಳಿವೆ, ಇದಕ್ಕೆ ಉತ್ಸಾಹ ಮುಖ್ಯವಾಗಿದ್ದು ಯಾವ ಪರೀಕ್ಷೆ ಬರೆಯಬೇಕು ಎನ್ನುವ ತಿಳಿವಳಿಕೆ ಬೇಕು. ಕರ್ನಾಟಕದ ಸೈನಿಕ ಶಾಲೆ ಕೊಡಗು ಮತ್ತು ಬಿಜಾಪುರದಲ್ಲಿದ್ದು, ಈ ವರ್ಷ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನೀಸ್ ಕುಟ್ಟಿ ಸಂಸ್ಥಾಪಕ ನಿರ್ದೇಶಕ, ಅನೀಸ್ ಡಿಫೆನ್ಸ್ ಕ್ಯಾರಿಯರ್ ಇನ್‌ಸ್ಟಿಟ್ಯೂಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net