

ಮಂಡ್ಯ: ದ್ವಿತೀಯ ಪಿಯುಸಿ ತೇರ್ಗಡೆ ನಂತರ ಇಂಜಿನಿಯರಿಂಗ್ ವಿಭಾಗದ ವಿವಿಧ ಕೋರ್ಸ್‌ಗಳ ಪ್ರವೇಶಾತಿ ಕುರಿತ ಕೆಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತು ಉಪಯುಕ್ತ ಮಾಹಿತಿ ಒದಗಿಸಲು ಜೂ.23ರಂದು ’ಓಪನ್ ಡೇ’ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.
ನಮ್ಮಲ್ಲಿ ಸಿವಿಲ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡೇಟಾ ಸೈನ್ಸ್, ಎಂಸಿಎ ಸೇರಿದಂತೆ 11 ಕೋರ್ಸ್ ಲಭ್ಯವಿದೆ. ಇದೇ ಪ್ರಥಮ ಬಾರಿಗೆ ಇಂಜಿನಿಯರಿಂಗ್ ಅಪೇಕ್ಷಿತ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇಂಜಿನಿಯರಿಂಗ್ ಶಿಕ್ಷಣದ ಪ್ರಾಮುಖ್ಯತೆ ಮತ್ತು ಒಳನೋಟಗಳನ್ನು ಹಂಚಿಕೊಳ್ಳುವ ಹಾಗೂ ಕೆಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆಯ ಉಪಯುಕ್ತ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸಿಇಟಿ ಸೆಲ್ನ ತಜ್ಞ ಉದಯ್‌ಶಂಕರ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಜಿನಿಯರಿಂಗ ಕೋರ್ಸ್ ಹಾಗೂ ಪ್ರವೇಶ ಪ್ರಕ್ರಿಯೆಗಳ ಲಭ್ಯತೆ ಬಗ್ಗೆ ವಿವರ ಸಿಗಲಿದೆ. ಕಾಲೇಜಿನಲ್ಲಿ ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ಕಾರ್ಯಾಗಾರವಿರಲಿದೆ. ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂದರೆ ಭವಿಷ್ಯದ ಇಂಜಿಯರಿಂಗ್ ಕ್ಷೇತ್ರದ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲು ಭೋದಕ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಮಾಧ್ಯಮ ಸಮನ್ವಯಾಧಿಕಾರಿ ಡಾ.ಕೋದಂಡರಾಮ ಉಪಸ್ಥಿತರಿದ್ದರು.