ಶಿಕ್ಷಿತರಿಂದಲೇ ದೇಶದ್ರೋಹಿ ಚಟುವಟಿಕೆ : ಸಾಹಿತಿ ಮುನಿರಾಜ ರೆಂಜಾಳ ಕಳವಳ

balanja
Published on

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಶಿಕ್ಷಿತರಿಂದ ದೇಶದ್ರೋಹದಂಥ ಚಟುವಟಿಕೆ ನಡೆಯುತ್ತಿದ್ದು ಇದಕ್ಕೆ ಸಂಸ್ಕಾರಯುತ ಶಿಕ್ಷಣ ಸಿಗದೆ ಇರುವುದು ಕಾರಣ ಎಂದು ಸಾಹಿತಿ, ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.

ಬಳಂಜ ಪ್ರಾಥಮಿಕ, ಪ್ರೌಢಶಾಲೆ, ಶಾಲಾಭಿವೃದ್ಧಿ ಸಮಿತಿ ಬಳಂಜ, ಅಮೃತಮಹೋತ್ಸವ ಸಮಿತಿ, ಯುವಕ ಮಂಡಲ ಬಳಂಜ, ಬಳಂಜ ಶಿಕ್ಷಣ ಟ್ರಸ್ಟ್ ಸಹಕಾರದಲ್ಲಿ ಜ್ಯೋತಿ ಮಹಿಳಾ ಮಂಡಲದ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಊರಿನವರ ಪಾತ್ರ ವಿಷಯ ಬಗ್ಗೆ ಮಂಗಳವಾರ ಆಯೋಜಿಸಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಶ್ವತ ಯೋಜನೆಗಳ ಮೂಲಕ ಅರ್ಥಪೂರ್ಣವಾಗಿ ಅಮೃತಮಹೋತ್ಸವ ಆಚರಿಸಲು ಹಲವಾರು ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಶಾಲಾ ಕಟ್ಟಡ, ಪ್ರೌಢಶಾಲಾ ಕಟ್ಟಡ, ಉತ್ತಮ ಕ್ರೀಡಾಂಗಣ ರಚನೆ, ಶಾಲಾ ತೋಟದ ಅಭಿವೃದ್ಧಿ ಮಾಡುವ ಮೂಲಕ 75ರ ಸಂಭ್ರಮ ಆಚರಿಸಲಾಗುವುದು ಎಂದರು.

ಮಹಿಳಾ ಮಂಡಳದ ಅಧ್ಯಕ್ಷೆ ಚೇತನಾ ಜೈನ್ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ಸುಖೇಶ್ ಎಸ್.ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಚಂದನಾ ಯು.ಪಡಿವಾಳ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನಾ ಕೆ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಸ್ವಾಮಿ ಉಪಸ್ಥಿತರಿದ್ದರು.

ಮಹಿಳಾ ಮಂಡಲ ವತಿಯಿಂದ ಸಾಹಿತಿ ಮುನಿರಾಜ ರೆಂಜಾಳ ಅವರನ್ನು ಅಭಿನಂದಿಸಲಾಯಿತು. ಸಾಹಿತಿ ಚಂದ್ರಹಾಸ ಚಾರ್ಮಾಡಿ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಯಕ್ಷಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net