

ಚನ್ನರಾಯಪಟ್ಟಣ : ಶಾಲಾ ಅಡುಗೆ ಸಿಬ್ಬಂದಿಗೆ ಕನಿಷ್ಠ ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ದಿನಗೂಲಿಗೆ ಸರಿಸಮನಾಗಿ ವೇತನ ನೀಡುವುದು ಸರ್ಕಾರದ ಹೊಣೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ, ಸಮಾಜದಲ್ಲಿ ಸತ್ಪ್ರಜೆಗಳಾಗಿ, ದೇಶಕ್ಕೆ ಆಸ್ತಿಯನ್ನಾಗಿಸುವಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಅಮೂಲ್ಯವಾಗಿದ್ದು. ಅವರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ಸರ್ಕಾರ ವೇತನ ನಿಗದಿಪಡಿಸಬೇಕು. ಮುಂದಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಗಾರದ ನಿಮಿತ್ತ ಆಯೋಜಿಸಿದ್ದ ಬೆಂಕಿ ರಹಿತವಾಗಿ ಪೌಷ್ಟಿಕಾಂಶದ ಅಡುಗೆ ತಯಾರಿಕ ಸ್ಪರ್ಧೆಯಲ್ಲಿ ಅಗಸರಹಳ್ಳಿ ಶಾಲೆಯ ವಿಜಯ ಪ್ರಥಮ, ಗೂರಮಾರನಹಳ್ಳಿ ಶಾಲೆಯ ಲೀಲಾ ದ್ವಿತೀಯ, ಚಿಕ್ಕಗನ್ನಿ ಶಾಲೆಯ ಗಂಗಮ್ಮ ತೃತೀಯ ಹಾಗೂ ತಾಲೂಕಿನ ವಿವಿಧ ಶಾಲೆ ಅಡುಗೆ ಸಿಬ್ಬಂದಿಗೆ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
.