

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಡವರು, ಹಿಂದುಳಿದವರು, ಮಕ್ಕಳು ಮಹಿಳೆಯರು ಸೇರಿ ಪ್ರತಿಯೊಬ್ಬರಿಗೂ ಸಕಾಲದಲ್ಲಿ ಸಮಾನ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೀತೇಂದ್ರ ಕುಮಾರ್ ಮಹೇಶ್ವರಿ ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಆಕಾಶ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ದೇವನಹಳ್ಳಿ ತಾಲೂಕು ಆಕಾಶ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವಿನ್ಯತಾ ಪರಿಹಾರ ಕ್ರಮಗಳು ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ನಾಗರೀಕರು ಕಾನೂನಿನ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು, ಕಾನೂನು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ ಎಂದ ನ್ಯಾಯಮೂರ್ತಿಗಳು ನ್ಯಾಯಾಲಯವು ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಲಿದೆ. ಹಾಗಾಗಿ ಎಲ್ಲರಿಗೂ ಕಾನೂನು ಅರಿವು ಮುಖ್ಯ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಬಗ್ಗೆ ಅರಿವಿರಲಿ: ನ್ಯಾಯಾಲಯ ಸಾರ್ವಜನಿಕರು ನೀಡುವ ದೂರುಗಳಿಗೆ ಸೂಕ್ತ ನ್ಯಾಯ ಒದಗಿಸುತ್ತದೆ. ಹಾಗೆಯೇ ಜನಸಾಮಾನ್ಯರೂ ತಮ್ಮ ಸಾಮಾಜಿಕ ನ್ಯಾಯ, ಜವಾಬ್ದಾರಿ ಬಗ್ಗೆ ತಿಳಿದಿರಬೇಕು ಎಂದು ನ್ಯಾಯಮೂರ್ತಿ ಹೇಳಿದರು. ಅಸಮಾನತೆ ಹೋಗಲಾಡಿಸುವುದು, ವೈವಿಧ್ಯತೆ ಕಾಪಾಡುವುದು, ಸಮಾನ ಅವಕಾಶ ಕಲ್ಪಿಸುವುದು, ಹಕ್ಕುಗಳ ರಕ್ಷಣೆ ನಮ್ಮ ಜವಾಬ್ದಾರಿ ಆಗಿದೆ. ಇವುಗಳನ್ನು ಅರಿತು ಸಮಾಜದಲ್ಲಿ ನಾವು ಜೀವನ ನಡೆಸಬೇಕು ಎಂದರು. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ವಿನೂತನ ಆವಿಷ್ಕಾರಗಳನ್ನು ಮಾಡುವ ಮೂಲಕ ಜನತೆಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೂರು ಲಕ್ಷ ಆದಾಯಕ್ಕಿಂತ ಕಡಿಮೆ ಇದ್ದರೆ ಅಂತಹವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಉಚಿತ ಕಾನೂನಿನ ನೆರವು ನೀಡಲಾಗುತ್ತದೆ ಶಿಕ್ಷಣದಿಂದ ಎಲ್ಲ ರೀತಿಯ ಕಾನೂನು ಅರಿವು ಪಡೆಯಬಹುದು ಎಂದರು.
ಪ್ರಕರಣ ವಿಲೇಯಲ್ಲಿ ದೇಶಕ್ಕೆ ಮೊದಲ ಸ್ಥಾನ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕ ಶೈಲಿ, ಹೊಸ ನಾವೀನ್ಯತೆ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಲೋಕಾಅದಾಲತ್ ಜಾರಿಗೆ ತರಲಾಯಿತು. ಅಂದರೆ ಪ್ರಕರಣಗಳ ವಿಲೇವಾರಿಯನ್ನು ದೂರುದಾರರ ಮನೆಯಿಂದಲೇ ನಡೆಸಿ ಸುಮಾರು 1.59 ಲಕ್ಷ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ ಎಂದರು. ದೇಶದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ ಸಾರ್ವಜನಿಕರಿಗೆ ಕಾನೂನು ಹಕ್ಕುಗಳ ಅರಿವು ಅಗತ್ಯವಿದೆ. ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.