ಮಹಿಳಾ ಸ್ವಾವಲಂಬನೆಗೆ ಸರ್ಕಾರಿ ಯೋಜನೆ

ceo
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ಡಾ.ಕೆ.ಎನ್. ಅನುರಾಧಾ ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪುಗಳಕಾರ್ಯಗಾರದಲ್ಲಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಹಾಗಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಂಚಾಯಿತಿ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿಕೊಂಡು ಗ್ರಾಮ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಸ್ವಾವಲಂಬಿಯಾಗಿ ದುಡಿದು ಆರ್ಥಿಕವಾಗಿ ಸಧೃಡರಾಗಬೇಕು. ಆರ್ಥಿಕವಾಗಿ ಸ್ವಾತಂತ್ರಳಾಗದಿದ್ದರೆ ಎಂದಿಗೂ ಅವಳು ಸಬಲಳಾಗಲು ಸಾಧ್ಯವಿಲ್ಲ ಅದಕ್ಕಾಗಿ ಸರ್ಕಾರ ಮಹಿಳೆಯರಿಗೆ ಎನ್‌ಆರ್‌ಎಲ್‌ಎಂ ಯೋಜನೆಯಡಿ ಹಲವು ಉಚಿತ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ ಮತ್ತು ಮಹಿಳೆಯರು ಸ್ವ ಉದ್ಯೊಗ ನಡೆಸಲು ಸ್ವ-ಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್‌ವಿಇಪಿ ಯೋಜನೆ: ಈ ಯೋಜನೆಯಡಿ 2400 ಮಹಿಳಾ ಉದ್ಯಮಿಗಳು ಸಾಲ ಪಡೆದು ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಭಾಗ್ಯಾ ಎಂಬುವವರು ಸ್ವ-ಸಹಾಯ ಸಂಘದಿಂದ ಈ ಯೋಜನೆಯಲ್ಲಿ ಸಾಲ ಪಡೆದು ಶುಭ ಸಮಾರಂಭಗಳಿಗೆ ಹೂವಿನ ಅಲಂಕಾರ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಇವರು ಲಾಭ ಗಳಿಸಿದ್ದಾರೆ. ಹಾಗೆಯೇ ಮಂಜಮ್ಮ ಎಂಬುವರು ಊಟದ ತಟ್ಟೆ ತಯಾರಕ ಯಂತ್ರ ಖರೀದಿಸಿ ಸ್ವ ಉದ್ಯೊಗವನ್ನು ಮಾಡುತ್ತಿದ್ದಾರೆ ಎಂದು ಸಿಇಒ ಮಾಹಿತಿ ನೀಡಿದರು.

ಕೂಸಿನ ಮನೆ ವರದಾನ: ಅನೇಕ ಮಹಿಳೆಯರು ಮಕ್ಕಳನ್ನು ನೋಡಿಕೋಳ್ಳುತ್ತಲೆ ದುಡಿದು ಜೀವನ ನಡೆಸುತ್ತಿದ್ದಾರೆ. ಅವರಿಗೆ ದುಡಿಯುವ ಆಸೆ ಇದ್ದರೂ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಅದಕ್ಕಾಗಿ ಕೂಸಿನ ಮನೆ ಪ್ರಾರಂಭಿಸಿದ್ದು ಮಹಿಳೆಯರು ಮಕ್ಕಳನ್ನು ಅಲ್ಲಿ ಬಿಟ್ಟು ಕೆಲಸಕ್ಕೆ ಹೋಗಿ ಬರಬಹುದು ಇದರಿಂದ ಮಹಿಳೆ ಆರ್ಥಿಕವಾಗಿ ಸಬಲಳಾಗಬಹುದು ಎಂದು ಸಿಇಒ ಸ್ವಚ್ಚವಾಹಿನಿ ವಾಹನವನ್ನು ಮಹಿಳೆಯರೆ ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ ಮತ್ತು ನಲ್ ಜಲ್ ಮಿತ್ರ ಯೋಜನೆಯಡಿ ಮಹಿಳೆಯರು ತರಬೇತಿ ಪಡೆದು ಕೆಲಸ ಮಾಡಬಹುದಾಗಿದ್ದು ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಮಹಿಳೆಯರಿಗೆ ತಿಳಿಸಿದರು.

ದೊಡ್ಡ ಆಲದ ಮರ: ಎನ್‌ಆರ್‌ಎಲ್‌ಎಂ ದೊಡ್ಡ ಆಲದ ಮರದ ರೀತಿ ಸವಿಸ್ತಾರವಾಗಿ ಬೆಳೆಯುತ್ತಿದೆ. ಈ ಯೋಜನೆಯಡಿ ಪ್ರಮುಖವಾಗಿ ಮಹಿಳೆಯರು ಸ್ವತಂತ್ರವಾಗಿ ಬದುಕಲು ಆಸರೆಯಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಒಂದು ಆಶಯ ನಮ್ಮದು, ಇದೀಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇಡುತ್ತಿರುವುದು ಸಂತೋಷದ ವಿಷಯ ಎಂದ ಅವರು, ಹೆಣ್ಣು ಮತ್ತು ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಹಾಗಾಗಿ ಮಹಿಳೆಯರನ್ನು ಎಲ್ಲ ಕ್ಷೇತ್ರದಲ್ಲಿ ಸಮಾನವಾಗಿ ಕಾಣಬೇಕು, ಇದರ ಜತೆಗೆ ಸ್ವ - ಸಹಾಯ ಸಂಘಗಳ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಶೆಡ್‌ಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net