

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೇವನಹಳ್ಳಿ ತಾಲೂಕು ಬೊಮ್ಮವಾರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ರೈತರಿಗಾಗಿ 2024-25ನೇ ಸಾಲಿನ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ದೇವನಹಳ್ಳಿ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ಅವರು ಆಟಲ್ ಭೂಜಲ್ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ನೀರಿನ ಮರು ಪೂರೈಕೆ:
ತರಬೇತಿಯಲ್ಲಿ ಅಟಲ್ ಭೂಜಲ್ ಯೋಜನೆಯಡಿ ರಾಜ್ಯದಲ್ಲಿ 14 ಜಿಲ್ಲೆಗಳ, 41 ತಾಲೂಕುಗಳಲ್ಲಿ ಬರುವಂತಹ 1199 ಗ್ರಾಮ ಪಂಚಾಯತಿಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷಾನಗೊಳ್ಳುತ್ತಿದ್ದು, ಅಂತರ್ಜಲದ ಅತಿಬಳಕೆಯನ್ನು ಕಡಿಮೆ ಮಾಡುವುದು. ಅಂತರ್ಜಲದ ಸುಸ್ಥಿರ ನಿರ್ವಹಣೆ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾಯೋಜನೆ ಸಿದ್ದಪಡಿಸುವುದು ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಟಲ್ ಭೂಜಲ್ ಯೋಜನೆಯ ಹಿರಿಯ ಭೂವಿಜ್ಞಾನಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೋಡಲ್ ಅಧಿಕಾರಿ ಪಲ್ಲವಿ, ತಾಂತ್ರಿಕ ಸಹಾಯಕಿ ನಿಷಿತ, ಕೃಷಿ ತಜ್ಞೆ ದೀಪ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಲಾಖೆ ಅಂತರ್ಜಲ ತಜ್ಞರಾದ ಮೋಹನ್, ನೀರಾವರಿ ಸಂಸ್ಥೆಯ ತೋಷಿಷ್ ರೈ, ಜೈರಾಮ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆರ್.ಕೆ. ಶಾರದ, ಸಹಾಯಕ ಕೃಷಿ ನಿರ್ದೇಶಕಿ ಸುಮಂಗಲ, ಕೃಷಿ ಅಧಿಕಾರಿ ಸತ್ಯನಾರಾಯಣ ಮತ್ತಿತರರು ಇದ್ದರು.