ನಿಮ್ಮ ನಿರೀಕ್ಷೆಗೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸುವೆ

19-kollegal-6,,
Published on

ಕೊಳ್ಳೇಗಾಲ: ನಾನು ಶಾಸಕನಾಗಬೇಕೆಂದು ಅಂದುಕೊಂಡಿದ್ದೆ, ಸಂಸದನಾಗಬೇಕು ಎಂಬ ಆಸೆ ಇಟ್ಟುಕೊಂಡಿರಲಿಲ್ಲ ಎಂದು ಚಾಮರಾಜನಗರ ಲೋಕಸಭಾ ಸದಸ್ಯ ಸುನೀಲ್ ಬೋಸ್ ಹೇಳಿದರು.


ಪಟ್ಟಣದ ಭೀಮನಗರ ಬಡಾವಣೆಯ ಮಾತೆ ಸಾವಿತ್ರಿ ಬಾಫುಲೆ ರಂಗವೇದಿಕೆಯಲ್ಲಿ ಶುಕ್ರವಾರ ಸಂಜೆ ಭೀಮನಗರದ ಸಮಸ್ತ ಕುಲಬಾಂಧವರು ಆಯೋಜಿಸಿದ್ದ ಸಂಸದ, ಶಾಸಕರು, ಕೊಳ್ಳೇಗಾಲ ನಗರಸಭಾ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.


ನಾನು ಮೊದಲ ಬಾರಿಗೆ ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಚುನಾಯಿತರಾಗಲು ನೀವೇ ಕಾರಣ. ಈ ನಡುವೆ ಸಂಸದನಾದ ನನಗಿಂದು ಭೀಮನಗರದಿಂದ ಗೌರವ ಸನ್ಮಾನ ನೀಡುತ್ತಿರುವುದು ಹೆಚ್ಚು ಸಂತಸ ತಂದಿದೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.


ಸಂಸದನಾಗಬೇಕು ಎಂದು ನಾನು ಆಸೆಪಟ್ಟಿರಲಿಲ್ಲ, ಕೇವಲ ಶಾಸಕ ಸ್ಥಾನ ಅಪೇಕ್ಷೆ ಪಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ಎದುರು ಇದೇ ಅಭಿಲಾಸೆ ವ್ಯಕ್ತಪಡಿಸಿದ್ದೆ. ಆದರೆ, ಅನಿವಾರ್ಯ ರಾಜಕಾರಣದಲ್ಲಿ ಎದುರಾದ ನಿಮ್ಮೆಲ್ಲರ ಪ್ರೀತಿ, ನಮ್ಮ ತಂದೆ ತಾಯಂದಿರ ಆಶೀರ್ವಾದ ಮತ್ತು ತಾಯಿ ಚಾಮುಂಡಿ ಕೃಪೆಯಿಂದ ಸಂಸದನಾಗಿದ್ದೇನೆ. ತಾವು ಕೊಟ್ಟ ಈ ಸ್ಥಾನ ಹಾಗೂ ನಿಮ್ಮೆಲ್ಲರ ನಿರೀಕ್ಷೆಗೆ ಧಕ್ಕೆ ಬಾರದಂತೆ ಸಂವಿಧಾನ ಬದ್ಧವಾಗಿ ಕೆಲಸ ಕಾರ್ಯಗಳನ್ನು ಜಿಲ್ಲೆಯ ನಮ್ಮ ಎಲ್ಲ ಶಾಸಕರು, ಮಾಜಿ ಶಾಸಕರ ಮಾರ್ಗದರ್ಶನದಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಕೆಲ ದಶಕಗಳ ಹಿಂದೆಲ್ಲ ವಿಶೇಷವಾಗಿ ಕೊಳ್ಳೇಗಾಲ ಸೇರಿದಂತೆ ಇತರಡೆಗಳಲ್ಲಿ ಕೋಮು ಗಲಭೇಗಳಾಗುತ್ತಿದ್ದವು. ಇಂದು ಆ ಪರಿಸ್ಥಿತಿಗಳಿಲ್ಲ. ಎಲ್ಲ ಜನರು ತಿಳಿವಳಿಕೆಯಿಂದ ವರ್ತಿಸುತ್ತಿದ್ದಾರೆ. ನಾನು ಚಿಕ್ಕನಿಂದಲೂ ನೋಡುತ್ತಿದ್ದಾಗ ಜಾತಿ ನಿಂದನೆ ಕೇಸುಗಳು ಹೆಚ್ಚು ಕಾಣಿಸುತ್ತಿತ್ತು. ಇದೀಗ ಅದಕ್ಕೆ ಅವಕಾಶ ಕೊಡುವುದಿಲ್ಲ. ಎಲ್ಲ ಕೋಮುಗಳನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ, ಇದರಿಂದ ನಮಗೂ ಖುಷಿ ಇದೆ ಎಂದರು.


ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಭೀಮನಗರದ 3ನೇ ವಾರ್ಡಿನ ನಗರಸಭಾ ಸದಸ್ಯೆಯಾದ ಸಿ.ಎನ್.ರೇಖಾ ರಮೇಶ್ ಅವರ ಮೇಲೆ ಅಪಾರ ವಿಶ್ವಾಸವಿಟ್ಟು 2ನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಂತೆಯೇ, ದೇವಾಂಗ ಸಮಾಜದ ನಗರಸಭಾ ಸದಸ್ಯ ಎ.ಪಿ.ಶಂಕರ್ ಅವರು 2ನೇ ಬಾರಿಗೆ ಉಪಾಧ್ಯ ಕ್ಷರಾಗಲು ಅವಕಾಶ ನೀಡಿದ್ದು, ಇದು ನನಗೆ ತೃಪ್ತಿ ತಂದೆ. ಅದೇ ರೀತಿ ಪಟ್ಟಣದ ಅಭಿವೃದ್ಧಿ ಇನ್ನಷ್ಟು ನಿಮ್ಮಿಬ್ಬರಿಂದ ಆಗಬೇಕು. ಎಲ್ಲ ಜನರಿಗೆ ಗೌರವ ತರುವ ಕೆಲಸವಾಗಬೇಕು ಎಂದು ಕರೆ ನೀಡಿದರು.


ಕೊಳ್ಳೇಗಾಲದ ಶಾಸಕನಾಗಿದ್ದೇನೆ. ಚುನಾವಣಾ ಪೂರ್ವದಲ್ಲಿ ಕೊಳ್ಳೇಗಾಲದ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದು, ಇದೀಗ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 3 ಕೋಟಿ ರೂ.ಅನುದಾನ ತಂದಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಭವನ ಉದ್ಘಾಟಿಸಲು ಎಲ್ಲರೂ ಸಹಕರಿಸಬೇಕು ಎಂದರು.


ಹನೂರು ಶಾಸಕ ಎಂ.ಆರ್.ಮಜುನಾಥ್, ಕೊಡಗು ಜಿಲ್ಲೆಯ ಎಎಸ್ಪಿ ಕೆ.ಎಸ್.ಸುಂದರರಾಜು, ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಬೆಂಗಳೂರಿನ ಡಿವೈಎಸ್ಪಿ ಎಚ್.ಕೆ.ಮಹಾನಂದ, ನಗರಸಭಾ ನೂತನಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಅವರು ಸಮಾರಂಭವನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿದ್ದ ನಗರಸಭಾ ಸದಸ್ಯರು, ವಿವಿಧ ಕೋಮಿನ ಮುಖಂಡರು ಹಾಗೂ ಭೀಮನಗರದ ಎಲ್ಲಾ ಯಜಮಾನರನ್ನು ಆಯೋಜಕರು ಸನ್ಮಾನಿಸಿದರು.


ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹಾದೇವ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್, ಜಾಮರಾಜನಗರ ಜಿಲ್ಲೆಯ ಕುಡಿಯುವ ನೀರು ವಿಭಾಗ ಇ.ಇ ಎಸ್. ಆನಂದಮೂರ್ತಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು ಮಾಳಿಗೆ, ನಗರಸಭೆ ಮಾಜಿ ಉಪಾ ಧ್ಯಕ್ಷ ಕಲಿಮುಲ್ಲ, ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಮನ್ಸೂರ್ ಪಾಷಾ, ಕಾಂಗ್ರೆಸ್ ಮುಖಂಡ ಅನ್ಸರ್‌ಬೇಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net