

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 192 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸಂಜೆ ಸಣ್ಣ ನೀರಾವರಿ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಲಾಖೆಯಿಂದ ಧಾರವಾಡ ಜಿಲ್ಲೆಗೆ 52 ಕೋಟಿ ರೂ. ನೀಡಲಾಗಿದೆ. ಅದಕ್ಕೂ ಹಿಂದಿನ ಅವಧಿಯ 140 ಕೋಟಿ ರೂ. ವೆಚ್ಚ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಹೇಗೆ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಅಧಿಕಾರಿಗಳಲ್ಲಿ ಇತ್ತು. ಇದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿ 2013ರಿಂದ 44 ಕೋಟಿ ರೂ. ವೆಚ್ಚದ ಹನಿ ನೀರಾವರಿ ಕಾಮಗಾರಿಯೊಂದು ನಡೆಯುತ್ತಲೇ ಇದೆ. ಅದಕ್ಕೆ, 24 ಕಿ.ಮೀ. ದೂರದಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಬೇಕಿದೆ. ಅಧಿಕಾರಿಗಳು ಮೈಂಡ್ ಅಪ್ಲೈ ಮಾಡದಿದ್ದರೆ ಇಂಥ ಲೋಪಗಳು ಆಗುತ್ತವೆ ಎಂದರು.
ಶಾಸಕರು ಪತ್ರ ಕೊಟ್ಟಿದ್ದಾರೆಂದು ಹಿಂದೆ ಮುಂದೆ ಯೋಚಿಸದೇ ಅಧಿಕಾರಿಗಳು ಎಷ್ಟೋ ಕೆಲಸಗಳನ್ನು ಮಾಡಿದ್ದಾರೆ. ಈ ಪ್ರವೃತ್ತಿಯನ್ನು ಅಧಿಕಾರಿಗಳು ಬಿಡಬೇಕು. ನನ್ನ ಬಳಿ ಯಾರಾದರೂ ಕಾಮಗಾರಿಗೆ ಸಂಬಂಧಿಸಿದಂತೆ ಪತ್ರ, ಮನವಿ ಕೊಟ್ಟರೆ ಪರಿಶೀಲಿಸಿ ವರದಿ ಮಾಡಿ ಎಂದು ಅಧಿಕಾರಿಗಳಿಗೆ ಹೇಳುತ್ತೇನೆ. ಜನರಿಗೆ ಉಪಯೋಗವಾಗುವುದಾದರೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
6 ತಿಂಗಳಲ್ಲಿ ಸರ್ಕಾರ ಉರುಳಿಸುವ ಆಶ್ವಾಸನೆ
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು 6 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ-ಜೆಡಿಎಸ್ ಒಟ್ಟಾಗಿ ಪ್ರಯತ್ನ ನಡೆಸಿವೆ. ಉತ್ತರ ಕರ್ನಾಟಕ ಭಾಗದ ಶಾಸಕರಿಗೂ ಆಫರ್ ಮಾಡಿದ್ದಾರೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಅನ್ವರ್ ಮುಧೋಳ, ಇತರರು ಇದ್ದರು.