

ಹಿರಿಯೂರು: ಬಹುಗ್ರಾಮ ಕುಡಿವ ನೀರಿನ ಕಾಮಗಾರಿ ವಿಳಂಬದಿಂದ 10-15 ಕೋಟಿ ಹಣ ವ್ಯರ್ಥವಾಗಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಜನರಿಗೆ ನೀರು ಕೊಡುವಂತೆ ಜಿಲ್ಲಾ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆ.ಜಿ.ಹಳ್ಳಿ ವ್ಯಾಪ್ತಿಯ 40 ಹಳ್ಳಿಗಳಿಗೆ ಕುಡಿವ ನೀರು ಪೂರೈಸುವ ಬಹುಗ್ರಾಮ ಕುಡಿವ ನೀರಿನ ಕಾಮಗಾರಿ ದಶಕದಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಅಧಿಕಾರಿಗಳು ಕಾಲಹರಣ ಮಾಡದೆ, ಜುಲೈ-ಆಗಸ್ಟ್ ವೇಳೆಗೆ ಟ್ರಯಲ್ ರನ್ ಮಾಡಲೇಬೇಕು ಎಂದರು.
ತಾಪಂ ಇಒ ಸತೀಶ್ ಕುಮಾರ್ ಮಾತನಾಡಿ, ಜನವರಿ-ಮೇ ವರೆಗೆ 67 ಹಳ್ಳಿಗಳಿಗೆ 6 ಸಾವಿರ ಟ್ರಿಪ್ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಪ್ರಸ್ತುತ ಕರಿಯಾಲ ಗ್ರಾಪಂ ವ್ಯಾಪ್ತಿಯ 6 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. 17 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಹಸನ್ ಬಾಷಾ ಮಾತನಾಡಿ, ತಾಲೂಕಿನಲ್ಲಿನ 164 ಕೊಳವೆ ಬಾವಿ ಕೊರೆಯಿಸಲಾಗಿದೆ. ವೇದಾವತಿ ನದಿ, ನಾಲೆಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ವೃದ್ಧಿಯಾಗಿದೆ. ಕಾಲಮಿತಿಯಲ್ಲಿ ಬಹುಗ್ರಾಮ ಕುಡಿವ ನೀರಿನ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜೆ.ಜಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿ, ಕುಡಿವ ನೀರಿನ ಅನುಕೂಲಕ್ಕೆ ತಾಲೂಕಿನ ಗಡಿಯವರೆಗೆ ನಾಲೆ ಮೂಲಕ ಗಾಯತ್ರಿ ಜಲಾಶಯದಿಂದ ನೀರು ಹರಿಸುವ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಸಚಿವರು ಸೂಚಿಸಿದರು.
ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಎಇಇ ವಿಜಯಕುಮಾರ್, ನಾಲೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿ ಕಷ್ಟ-ಸಾಧ್ಯ, ಸುವರ್ಣಮುಖಿ ನದಿಗೆ ನೀರು ಹರಿಸಿದರೆ ಕುಡಿವ ನೀರು, ಕೃಷಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹುಚ್ಚವ್ವನಹಳ್ಳಿ ಗ್ರಾಮದ ಪುಡ್ ಪಾಕ್ ಬಳಿ ಕುಡಿವ ನೀರಿನ ಪೈಪ್ ಹೊಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ, ರಸ್ತೆ ಹಾಳಾಗಿದೆ, ವಾಹನ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಏಕೆ ಗಮನ ಹರಿಸಿಲ್ಲ ಎಂದು ನಗರಸಭೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆ ಕುರಿತು ಉತ್ತರ ನೀಡಿದ ತಾಪಂ ಇಒ ಸತೀಶ್‌ಕುಮಾರ್ ವಿರುದ್ಧ ಸಿಟ್ಟಿಗೆದ್ದ ಸಚಿವರು, ನೀವು ಕೆಲಸ ಮಾಡುವುದಿಲ್ಲ, ಮೊದಲು ಇಲ್ಲಿಂದ ಹೋಗಿ ಎಂದರು.
ಎಇಇ ಹಸನ್ ಬಾಷಾ ಮಾತನಾಡಿ, ಹಿರಿಯೂರು ತಾಲೂಕಿನಲ್ಲಿ 201 ಆರ್‌ಒ ಪ್ಲಾಂಟ್ ಇದ್ದು, ಏಜೆನ್ಸಿಗಳ ನಿರ್ಲಕ್ಷ್ಯದಿಂದ ಕೆಲವೆಡೆ ಕುಡಿವ ನೀರಿಗೆ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಪ್ರತಿಕ್ರಿಯಿಸಿದ ಸಚಿವರು, ಏಜೆನ್ಸಿಗಳನ್ನು ಬಿಟ್ಟು ನೀವೆ ದುರಸ್ತಿ ಮಾಡಿಸಿ, ಕುಡಿವ ನೀರಿನ ವಿಚಾರದಲ್ಲಿ ಬೇಜವಾಬ್ದಾರಿ ತೋರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಕೃಷಿ ಅಧಿಕಾರಿ ಮಂಜುನಾಥ್ ಮಾತನಾಡಿ, ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ರೈತರ ಖಾತೆಗೆ 9.95 ಕೋಟಿ ಬರ ಪರಿಹಾರ ಹಣ ಜಮೆ ಮಾಡಲಾಗಿದೆ ಎಂದರು.
ತಹಸೀಲ್ದಾರ್ ರಾಜೇಶ್ ಕುಮಾರ್, ಕೆಡಿಪಿ ಸದಸ್ಯರಾದ ಗುರುಪ್ರಸಾದ್, ಶಿವಕುಮಾರ್, ಮಹಂತೇಶ್, ಅಯೂಬ್ ಖಾನ್, ನಗರ ಸಭೆ ಪೌರಾಯುಕ್ತ ಮಹಂತೇಶ್, ಬೆಸ್ಕಾಂ ಎಇಇ ಪೀರ್‌ಸಾಬ್, ಮುಸ್ತಾಕ್, ಬಿಇಒ ತಿಪ್ಪೇಸ್ವಾಮಿ, ಆರ್‌ಎಫ್‌ಒ ಶ್ವೇತಾ ಯಾದವ್, ಶಶಿಧರ್, ತೋಟಗಾರಿಕೆ ಇಲಾಖೆ ಅಧಿಕಾರಿ ಲೋಕೇಶ್, ಈಶ್ವರಪ್ಪ, ಲಿಂಗರಾಜ್ ಇತರರಿದ್ದರು.