ದುಡಿಯುವ ಸ್ಥಳದಲ್ಲಿ ಹೆಚ್ಚುತ್ತಿವೆ ಕಿರುಕುಳ: ಸಿಐಟಿಯು ಕಾರ್ಯದರ್ಶಿ ಕಾರ್ಯದರ್ಶಿ ಎ.ಆರ್.ಸಿಂಧು ಬೇಸರ

Working Womens State Convention Mandya
Published on

ಮಂಡ್ಯ: ಮಹಿಳೆಯರ ಪರಿಸ್ಥಿತಿ ನರಕದಂತಿದೆ. ದುಡಿಯುವ ಸ್ಥಳದಲ್ಲಿಯೂ ಕಿರುಕುಳ ಹೆಚ್ಚಾಗಿ ಹೀನ ಕೃತ್ಯಗಳು ನಡೆಯುತ್ತಿವೆ ಎಂದು ಅಖಿಲ ಭಾರತ ಸಿಐಟಿಯು ಕಾರ್ಯದರ್ಶಿ ಎ.ಆರ್.ಸಿಂಧು ಆತಂಕ ವ್ಯಕ್ತಪಡಿಸಿದರು.

ನಗರದ ಎಸ್.ಬಿ ಸಮುದಾಯ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ದುಡಿಯುವ ಮಹಿಳೆಯರ 9ನೇ ರಾಜ್ಯ ಸಮಾವೇಶದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡು ಮೂರು ದಿನಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆದಿವೆ ಎಂಬುದು ಎಳೆಎಳೆಯಾಗಿ ಚರ್ಚೆಯಾಗುತ್ತಿವೆ. ಧರ್ಮಸ್ಥಳದಲ್ಲಿ ಹೇಗೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಮಾತುಗಳ ಕೇಳಿ ಬರುತ್ತಿವೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಎಂಬ ರಾಜಕಾರಣಿಗೆ ಶಿಕ್ಷೆ ಆಗಿರುವ ಬಗ್ಗೆ ನೋಡುತ್ತದ್ದೇವೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಮಧುರಾ, ಕಾಶಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಪ್ರಕರಣಗಳು ಜರುಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪುರುಷ ಪ್ರಧಾನ ಪಾಳೆಗಾರಿಕೆ ವ್ಯವಸ್ಥೆ ಒಳಗಡೆ ಮಹಿಳೆಯರನ್ನು ರಕ್ಷಣೆ ಮಾಡುವಂತಹ ವ್ಯವಸ್ಥೆಗಳು ಇಂತಹ ಘಟನೆಗಳನ್ನು ತಡೆಯುತ್ತಿಲ್ಲ ಎಂದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ದುಡಿಯುವ ಮಹಿಳೆಯರಿಗೆ ಯಾವುದೇ ತಾರತಮ್ಯವಿಲ್ಲದೆ ಹೆರಿಗೆ ಭತ್ಯೆ ಜಾರಿ ಮಾಡಬೇಕು. ಗುತ್ತಿಗೆ, ಹೊರಗುತ್ತಿಗೆ, ಗೌರವಧನ, ಪ್ರೋತ್ಸಾಹ ಧನ, ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ಹೆರಿಗೆ ಸೌಲಭ್ಯ ನೀಡಬೇಕು. ಆ ಸೌಲಭ್ಯ ನೀಡದ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಜಿ.ರಾಮಕೃಷ್ಣ, ಬಾಲಾಜಿರಾವ್, ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಕಾರ್ಯದರ್ಶಿಗಳಾದ ಸಿ.ಕುಮಾರಿ, ಮಾಲಿನಿ ಮೇಸ್ತಾ, ಸಂಚಾಲಕಿ ಎಚ್.ಎಸ್.ಸುನಂದಾ, ಜಿಲ್ಲಾಧ್ಯಕ್ಷ ಶಿವಕುಮಾರ್, ಸಿಪಿಎಂ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net