

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ದಿನಾಚರಣೆ ಅಂಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾ. 8ರಂದು ಏರ್ಪಡಿಸಿರುವ ಗೌರಮ್ಮ ಚನ್ನಪ್ಪ ಹಲಗತ್ತಿ ದತ್ತಿ ಕಾರ್ಯಕ್ರಮದಲ್ಲಿ ನಿಂಗಮ್ಮ ಸವಣೂರ ಅವರಿಗೆ ಶ್ರಮಿಕ ಮಹಿಳೆ-2025 ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಮಾಹೂರ ಗ್ರಾಮದ ನಿಂಗಮ್ಮ ಸವಣೂರ, ಅತ್ಯಂತ ಕಿರಿ ವಯಸ್ಸಿನಲ್ಲೇ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ವಯಸ್ಸಿಗೂ ಮೀರಿ ಸಾಧನೆ ಮಾಡಿದ್ದಾರೆ. ಕಲಘಟಗಿ, ಅಳ್ನಾವರ, ಕುಂದಗೋಳ ತಾಲೂಕುಗಳ ದುಡಿಯುವ ವರ್ಗದ ಮಹಿಳೆಯರ ಧ್ವನಿಯಾಗಿ ಕಾರ್ಯ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ಸಾವಿರಾರು ಮಹಿಳೆಯರಿಗೆ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ.
ಸಾಮಾಜಿಕ ಪಿಡುಗಾಗಿರುವ ಮದ್ಯಪಾನ ನಿಷೇಧಕ್ಕೆ ಸಂಬಂಧಿಸಿ ಹಲವು ಹೋರಾಟಗಳನ್ನು ನಡೆಸಿ ನೂರಾರು ಕುಟುಂಬಗಳನ್ನು ಉಳಿಸುವಂತೆ ಮಾಡಿರುವರು. ಮಹಿಳೆಯರಲ್ಲಿ ಪ್ರಶ್ನಿಸುವ ಮತ್ತು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಂತೆ ಮಾನಸಿಕವಾಗಿ ಅವರನ್ನು ಅಣಿಗೊಳಿಸಿದ್ದು ಇವರ ಬಹುದೊಡ್ಡ ಕಾರ್ಯವಾಗಿದೆ. ಇವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.