ಅಕ್ರಮ ಮದ್ಯ ಮಾರಾಟ ಮಾಡಿದರೆ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

Working residents grievance meeting Mandya
Published on
ಮಂಡ್ಯ: ಶ್ರಮಿಕ ಪ್ರದೇಶಗಳಲ್ಲಿ ಯುವಕರು ಮದ್ಯ ಸೇವಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಹಾಗೂ ಸ್ಲಂಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರಮಿಕ‌ ನಿವಾಸಿಗಳ‌ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಕಾಳಪ್ಪ ಬಡಾವಣೆ ಶ್ರಮಿಕ ಜನರ ನಿವೇಶನ ನೀಡಲು ಮಂಡ್ಯ ನಗರದಲ್ಲಿ ಯಾವುದೇ ಖಾಲಿ ನಿವೇಶನ ಇಲ್ಲ. ಆದ್ದರಿಂದ ಮಂಡ್ಯ ನಗರದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸುವಂತೆ ತಿಳಿಸಿದರು.
ನಿವೇಶನ ನೀಡುವ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನಿನ ಸಮಸ್ಯೆ ಉಂಟಾಗಬಾರದು. ಸುಮಾರು 9 ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶ್ರಮಿಕ ಜಾಗದಲ್ಲಿ ವಾಸವಾಗಿರುವ 45 ಜನರಿಗೆ ನಿವೇಶನ ನೀಡಲು ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ ಕೆಲ ಫಲಾನುಭವಿಗಳ ದಾಖಲಾತಿ ಕೊರತೆಯಿಂದ 34 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಉಳಿದ 11 ಜನ ಸೂಕ್ತ ದಾಖಲೆಗಳನ್ನು ನೀಡಿದರೆ ನಿವೇಶನ ಹಂಚಿಕೆ ಮಾಡಬಹುದು ಎಂದು ಹೇಳಿದರು.
ಮಿಮ್ಸ್ ನಲ್ಲಿ ಈಗಾಗಲೇ "ಸಖಿ ಸೆಂಟರ್" ತೆರೆಯಲಾಗಿದೆ. ಕಾರ್ಮಿಕರು ಹೆಚ್ಚಾಗಿ ಮಿಮ್ಸ್ ಆಸ್ಪತ್ರೆಗೆ ಬರುವ ಸಾಧ್ಯತೆ ಇರುತ್ತದೆ. ಶ್ರಮಿಕ‌ ನಗರದಿಂದ ಬರುವ ಸ್ತ್ರೀಯರಿಗೆ ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬ ಮಾಡದೆ ಚಿಕಿತ್ಸೆ ನೀಡಿ ಎಂದು ನಿರ್ದೇಶನ ನೀಡಿದರು.
ಕಾರ್ಮಿಕ ಇಲಾಖೆಯಿಂದ ನಕಲಿ ಕಾರ್ಮಿಕ ಗುರುತಿನ ಚೀಟಿ ಪಡೆದು ನಿಜವಾದ ಕಾರ್ಮಿಕರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ನಕಲಿ ಕಾರ್ಮಿಕ ಕಾರ್ಡ್ ಅನ್ನು ಹೊಂದಿರುವವರು ಪಡೆಯುತ್ತಿದ್ದಾರೆ. ಸರ್ಕಾರಿ ಸೌಲಭ್ಯ ನೀಡಬೇಕಾದರೆ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೌಲಭ್ಯ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶ್ರಮಿಕ ನಿವಾಸಿಗಳಿರುವ ಮಕ್ಕಳಿಗೆ ವಿಶೇಷ ಆಧಾರ್ ಶಿಬಿರವನ್ನು ಏರ್ಪಡಿಸಿ ಎಲ್ಲ ಮಕ್ಕಳಿಗೂ ಆಧಾರ್ ನೋಂದಣಿ ಮಾಡಿ, ಇಲ್ಲದಿದ್ದಲ್ಲಿ ಅವರಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಯಾವುದೇ ಸೌಲಭ್ಯ ಪಡೆಯಲು ಸಾಧ್ಯಾವಾಗುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮುಡಾ ಆಯುಕ್ತ ಕೃಷ್ಣಕುಮಾರ್, ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್. ನರಸಿಂಹಮೂರ್ತಿ, ತಹಸೀಲ್ದಾರ್ ವಿಶ್ವನಾಥ್,  ಪೌರಾಯುಕ್ತೆ ಪಂಪಾಶ್ರೀ, ಮದ್ದೂರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಸ್ಲಂ ಬೋರ್ಡ್ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net