ಕೃಷಿ ಸ್ವಯಂ ಸೇವಾ ಸಂಸ್ಥೆಗಳ ಕೆಲಸ ಮಾದರಿ

3
Published on

ಆಧುನಿಕ ಕೃಷಿಯ ಅಬ್ಬರದಲ್ಲಿ ಮೂಲೆಗುಂಪಾಗಿದ್ದ ಸಿರಿಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸಿ, ಗ್ರಾಹಕರಿಗೆ ಆರೋಗ್ಯಕರ ಆಹಾರ ಒದಗಿಸುತ್ತಿರುವ ಕೃಷಿ ಸ್ವಯಂ ಸೇವಾ ಸಂಸ್ಥೆಗಳ ಕೆಲಸ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಪ್ರಶಂಸಿಸಿದರು.

ಸಹಜ ಸಮೃದ್ಧ ಸಂಸ್ಥೆಯು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಿರಿಧಾನ್ಯ ಮೇಳದ ಅಂಗವಾಗಿ ಇಲ್ಲಿನ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರಕಲೆ ಮತ್ತು ಅಡುಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಿರಿಧಾನ್ಯಗಳು ಭೂಮಿ ಹಾಗೂ ಪರಿಸರದ ಆರೋಗ್ಯಕ್ಕೆ ಪೂರಕ. ಅತ್ತ ರೈತರಿಗೂ ಇತ್ತ ಗ್ರಾಹಕರಿಗೂ ಒಳಿತು ಮಾಡುವ ಸಿರಿಧಾನ್ಯಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಸಿರಿಧಾನ್ಯವನ್ನು ಮೌಲ್ಯವರ್ಧನೆಗೊಳಿಸಿ, ಎಷ್ಟೆಲ್ಲ ಬಗೆಯ ತಿನಿಸುಗಳನ್ನು ಮಾಡಬಹುದು ಎಂಬುದನ್ನು ಅಡುಗೆ ಸ್ಪರ್ಧೆಯ ಮೂಲಕ ತೋರಿಸಲಾಗಿದೆ. ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಇಂಥ ಮೇಳಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಲಹೆ ಮಾಡಿದರು.

ರಾಜ್ಯ ಸರ್ಕಾರದ ಕೃಷಿ ಸಲಹೆಗಾರ ಎ.ಬಿ. ಪಾಟೀಲ ಮಾತನಾಡಿ, ಕೃಷಿ ಬೆಳೆಗಳ ಮೌಲ್ಯವರ್ಧನೆಯು ಇಂದು ಅಗತ್ಯವಾಗಿದೆ. ಉತ್ಪಾದನೆ ಜತೆಗೆ ಪ್ಯಾಕಿಂಗ್ ಹಾಗೂ ರಫ್ತು ಮಾಡಲು ರೈತ ಗುಂಪುಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ವೀರಗಾಸೆ ಕಲಾವಿದ ಅಂಬಾಳೆ ಶಿವಣ್ಣ, ಕೃಷಿ ವಿಜ್ಞಾನಿ ಎಚ್.ವಿ. ದಿವ್ಯಾ, ಸಹಜ ಆರ್ಗ್ಯಾನಿಕ್ ಸಿಇಒ ಬಿ.ಸೋಮೇಶ್, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net