

ಭಟ್ಕಳ: ರಂಗಭೂಮಿ ಕಲಾವಿದ ದಾಮಣ್ಣ ಎಂದೆ ಖ್ಯಾತಿ ಪಡೆದ ಡಿ.ಕೆ. ಮೊಗೇರ ಅವರಿಗೆ ಭಟ್ಕಳ ತಾಲೂಕಿನ ಶ್ರೀಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದಿಂದ ಮಾ. 27ರ ವಿಶ್ವ ರಂಗಭೂಮಿ ದಿನದಂದು ಅವರ ಮನೆಯಂಗಳಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ, ಶಿಕ್ಷಕ ನಾರಾಯಣ ನಾಯ್ಕ ಮಾತನಾಡಿ, ಭಟ್ಕಳದ ಶ್ರೀ ರಾಘವೇಂದ್ರ ಕಲಾಮಿತ್ರ ಮಂಡಳಿಯ ಸಂಸ್ಥಾಪಕರಾಗಿ 60ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಧನಿಕರಿಲ್ಲದ ಕನಿಕರು, ಕೆಟ್ಟಮೇಲೆ ಬುದ್ಧಿ ಬಂತು, ಹುಂಬ ಮೆಚ್ಚಿದ ಹುಡುಗಿ, ಈಗ ಹೆಂಗಾತು, ಪುಡಾರಿ ನಿಂಗಪ್ಪ, ಸತಿ ಸಂಸಾರದ ಜ್ಯೋತಿ ಸೇರಿ ಸಾಮಾಜಿಕ ನಾಟಕಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಲಾಭಿಮಾನಿಗಳ ಮನಗೆದ್ದ ಇವರು, ಈ ನೆಲದ ಸಂಸೃ್ಕ, ಪರಂಪರೆ ಹಾಗೂ ಐತಿಹಾಸಿಕ ಘಟನೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಸಾರಿ ಹೇಳಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಷ್ಟೇ ಅಲ್ಲದೆ, ಸಾಮಾಜಿಕ ಕ್ಷೇತ್ರದಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ ಎಂದರು.
ಶ್ರೀ ಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಜಗದೀಶ ನಾಯ್ಕ ಬೆಳಕೆ, ಉಪಾಧ್ಯಕ್ಷ ಎಸ್.ಎನ್. ದೇವಾಡಿಗ, ಕಾರ್ಯದರ್ಶಿ ದೇವ ನಾಯ್ಕ, ಕಲಾವಿದರಾದ ಕೆ.ಆರ್. ನಾಯ್ಕ, ಅಶೋಕ ಮಹಾಲೆ, ವೆಂಕಟೇಶ ನಾಯ್ಕ ತಲಗೋಡ, ಗೋವಿಂದ ದೇವಾಡಿಗ, ಗಣಪತಿ ಆಚಾರಿ, ನರಸಿಂಹ ನಾಯ್ಕ, ಎಫ್.ಕೆ. ಮೊಗೇರ, ಶ್ರೀಧರ ನಾಯ್ಕ ಆಸರಕೇರಿ, ಶ್ರೀಧರ ಆಚಾರಿ ಇದ್ದರು.