ಮೇಲ್ದರ್ಜೆಗೇರದ ಗಜೇಂದ್ರಗಡ ಠಾಣೆ

3 GJD-1
ಗಜೇಂದ್ರಗಡ ಪೊಲೀಸ್ ಠಾಣೆ
Published on

ಗಜೇಂದ್ರಗಡ: ತಾಲೂಕು ಕೇಂದ್ರ, ವಾಣಿಜ್ಯ ನಗರ, ಕೋಟೆ ನಾಡು ಎಂದೇ ಕರೆಯಿಸಿಕೊಳ್ಳುವ ಗಜೇಂದ್ರಗಡ ಪಟ್ಟಣದಲ್ಲಿ ತಾಲೂಕು ಕೇಂದ್ರವೊಂದಕ್ಕೆ ಅಗತ್ಯವಿರುವ ಸರ್ಕಾರಿ ಕಚೇರಿಗಳೇ ಇಲ್ಲ. ತಾಲೂಕು ರಚನೆಯಾಗಿ ಹಲವು ವರ್ಷಗಳಾದರೂ ಅನೇಕ ಸರ್ಕಾರಿ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವಾಗಿಲ್ಲ.

ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡ ಪಟ್ಟಣದಲ್ಲಿ ಪ್ರತಿವರ್ಷ ಅಪರಾಧ ಪ್ರಕರಣಗಳ ಸಂಖ್ಯೆ ಏರುಮುಖವಾಗಿದೆ. ಆದರೆ ಪಟ್ಟಣದಲ್ಲಿರುವ ಪೊಲೀಸ್ ಉಪ ನಿರೀಕ್ಷಕ ಠಾಣೆಯನ್ನು ಪೊಲೀಸ್ ನಿರೀಕ್ಷಕ ಠಾಣೆಯನ್ನಾಗಿ (ಪಿಐ ಸ್ಟೆಷನ್) ಇನ್ನೂ ಮೇಲ್ದರ್ಜೆಗೇರಿಸಿಲ್ಲ. ಇದರಿಂದ ಕಾನೂನು, ಸುವ್ಯವಸ್ಥೆ ಪಾಲನೆಯಲ್ಲಿ ತೊಡಕುಗಳು ಉಂಟಾಗುತ್ತಿವೆ.

ಗಜೇಂದ್ರಗಡ ಪೊಲೀಸ್ ಠಾಣೆ 36 ಹಳ್ಳಿಗಳ ವ್ಯಾಪ್ತಿ ಒಳಗೊಂಡಿದೆ. 2011ರ ಜನಗಣತಿ ಪ್ರಕಾರ 83,677 ಜನಸಂಖ್ಯೆ ಹೊಂದಿದೆ. ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ಚಿಕ್ಕದಾಗಿದ್ದರೂ ಅದನ್ನು ನಿರೀಕ್ಷಕ ಠಾಣೆಯಾಗಿ ಉನ್ನತೀಕರಿಸಲಾಗಿದೆ. ಆದರೆ ಗಜೇಂದ್ರಗಡ ಪಟ್ಟಣ ನೂತನ ತಾಲೂಕು ಕೇಂದ್ರವಾಗಿ ಅನೇಕ ವರ್ಷಗಳಾದರೂ ಪಟ್ಟಣದಲ್ಲಿರುವ ಪೊಲೀಸ್ ಠಾಣೆ ರೋಣ ಪೊಲೀಸ್ ಠಾಣೆಯ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಈ ಠಾಣೆಯಲ್ಲಿ ಪಿಎಸ್‌ಐ, ನಾಲ್ವರು ಎಎಸ್‌ಐ, 12 ಹೆಡ್ ಕಾನ್‌ಸ್ಟೆಬಲ್, 26 ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದು, ಕ್ರೈ ಪಿಎಸ್‌ಐ ಹುದ್ದೆ ಖಾಲಿಯಿದೆ.

ಗಜೇಂದ್ರಗಡ ಪಟ್ಟಣ ವಾಣಿಜ್ಯ ಕೇಂದ್ರವಾಗಿದೆ. ಠಾಣೆಯ ವ್ಯಾಪ್ತಿ, ಜನದಟ್ಟಣೆ, ಅಪರಾಧ ಪ್ರಕರಣಗಳು ಹೆಚ್ಚಿರುವುದರಿಂದ ಗಜೇಂದ್ರಗಡ ಪೊಲೀಸ್ ಠಾಣೆಯನ್ನು ನಿರೀಕ್ಷಕ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಠಾಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆಯಾಗುವುದರ ಜತೆಗೆ ಹಲವು ಕ್ಲಿಷ್ಟಕರ ಮತ್ತು ಸೂಕ್ಷ್ಮ ಪ್ರಕರಣಗಳಲ್ಲಿ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿ ಪರಿಣಾಮಕಾರಿಯಾಗಿ ತನಿಖೆ ನಡೆಸಿ ಪ್ರಕರಣ ಬೇಧಿಸಲು ಸಹಕಾರಿಯಾಗುತ್ತದೆ.

ಗಜೇಂದ್ರಗಡ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಲು ಎಲ್ಲ ರೀತಿಯಲ್ಲೂ ಅರ್ಹವಿದೆ. ಮೇಲ್ದರ್ಜೆಗೇರಿಸಲು ಹಿರಿಯ ಅಧಿಕಾರಿಗಳ ಬಳಿ ಪ್ರಸ್ತಾವ ಇದೆ. ಮೇಲಧಿಕಾರಿಗಳಲ್ಲಿ ಮಟ್ಟದಲ್ಲಿಯೂ ಈ ವಿಷಯ ಚರ್ಚೆಯಲ್ಲಿದೆ.-ಬಿ.ಎಸ್. ನೇಮಗೌಡ, ಪೊಲೀಸ್ ವರಿಷ್ಠಾಧಿಕಾರಿ, ಗದಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net