ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕ ವರ್ಗ

28sunti01
ಸುಂಟಿಕೊಪ್ಪ ಗ್ರಾಪಂ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಬೆರಳೆಣಿಕೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಜಿಲ್ಲೆಯಲ್ಲೇ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆ ಒಂದೆಡೆಯಾದರೆ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಪ್ರದೇಶ ಎಂಬುದು ಮತ್ತೊಂದೆಡೆ. ಆದರೆ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಜನರು ಮಾತ್ರ ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಗ್ರೇಡ್ 1 ಪಂಚಾಯಿತಿ ಎಂಬ ಹೆಸರಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿರುವ ಅರ್ಧದಷ್ಟು ಜನರು ಕೂಲಿ ಕಾರ್ಮಿಕ ವೃತ್ತಿಯನ್ನೇ ಅವಲಂಬಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಕೂಲಿ ಕಾರ್ಮಿಕರಿಗೆ ಸೌಲಭ್ಯ ಒದಗಿಸಿಕೊಡಬೇಕೆಂಬ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಕಾರ್ಮಿಕ ಇಲಾಖೆ ಮೂಲಕ ಜಾರಿಗೆ ತಂದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಜನರು ಈ ಯೋಜನೆಯ ಫಲಾನುಭವಿಗಳಾಗಬೇಕಿತ್ತು. ಆದರೆ ದಾಖಲಾತಿಯಲ್ಲಿ ಕೇವಲ ಎರಡಂಕಿ ಸಂಖ್ಯೆಯಲ್ಲಿ ನೋಂದಣಿಯಾಗಿರುವುದು ವಿಪರ್ಯಾಸ. ಇದು ಕಾರ್ಮಿಕ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೈಜವಾಗಿ ಕಾರ್ಮಿಕ ವೃತ್ತಿಯನ್ನೇ ನಿರ್ವಹಿಸುತ್ತಿರುವವರು ಅಂದಾಜು 12,000 ಕ್ಕೂ ಹೆಚ್ಚು ಎನ್ನಬಹುದು. ಅದರಲ್ಲೂ ಬಹುಪಾಲು ಜನರು ಕೂಲಿಯನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿಯ ಕಾರ್ಮಿಕ ವರ್ಗದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ಆರೋಗ್ಯ, ವಿಮೆ, ಪಿಂಚಣಿ, ವಸತಿ ಸೌಲಭ್ಯ, ಮಕ್ಕಳ ಶಿಕ್ಷಣ, ಪ್ರೋತ್ಸಾಹಧನ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಾಲ ಸೌಲಭ್ಯವೂ ಒಳಗೊಂಡಿದೆ.

ಫಲಾನುಭವಿಗೆ ಸೌಲಭ್ಯ ನೇರವಾಗಿ ತಲುಪಬೇಕೆಂಬ ಕಾರಣಕ್ಕೆ ಎಲ್ಲವನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ. ಅಲ್ಲದೆ ಗ್ರಾಹಕರ ಬ್ಯಾಂಕ್ ಖಾತೆಗೆ ಕೂಲಿ ಜಮೆಯಾಗುವ ಹಿನ್ನೆಲೆಯಲ್ಲಿ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ. ಕಾರ್ಮಿಕರಿಗೆ ಸಹಾಯ ಮತ್ತು ಮಾರ್ಗದರ್ಶನ ಮಾಡುವ ನೆಪದಲ್ಲಿ ಲಾಭಾಂಶ ಪಡೆಯುವ ಅಥವಾ ಕಮಿಷನ್ ಪಡೆಯುವ ಹುನ್ನಾರಕ್ಕೆ ಕತ್ತರಿಯೂ ಬಿದ್ದಿದೆ. ಆದರೂ ಸರ್ಕಾರಗಳ ಯೋಜನೆ ಪೂರ್ಣ ಪ್ರಮಾಣದಲ್ಲಿ ಅರ್ಹರನ್ನು ತಲುಪದಿರುವುದು ಬಡ ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಗ್ರಹಣ ಬಡಿದಂತಾಗಿದೆ.

ಕಾರ್ಮಿಕ ಇಲಾಖೆ ಅಧಿಕಾರಿಗಳು ಕನಿಷ್ಠ ಮಾನವೀಯತೆ ದೃಷ್ಟಿಯಿಂದ 6 ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಯೋಜನೆಗಳ ಅರಿವು ಶಿಬಿರ ಏರ್ಪಡಿಸಿ ಆರ್ಹ ಫಲಾನುಭವಿಗೆ ಸರ್ಕಾರದ ಯೋಜನೆ ತಲುಪಿಸುವ ಮತ್ತು ಮಾಹಿತಿ ನೀಡುವ ವ್ಯವಸ್ಥೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ. ಇನ್ನು ಮುಂದೆಯಾದರೂ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮಹತ್ತರ ಯೋಜನೆಗಳನ್ನು ಸರಕಾರದ ಮಟ್ಟದಲ್ಲೇ ಉಳಿದುಕೊಳ್ಳದೆ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವ ಮೂಲಕ ದಕ್ಷತೆ ಮೆರೆಯಲಿ ಎಂಬುದು ಕಾರ್ಮಿಕರ ಆಶಯ.

ವ್ಯವಸ್ಥೆ ಎಂಬುದು ಬಂದಾಗ ಕಾರ್ಮಿಕರು ಅಭಿವೃದ್ಧಿಯ ಹರಿಕಾರರಾಗಿರುವುದರ ಜತೆಗೆ ವ್ಯವಸ್ಥೆಯ ಜೀವಾಳವೂ ಹೌದು. ಕಠಿಣ ಪರಿಶ್ರಮದಿಂದ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಕಾರ್ಮಿಕರನ್ನು ಇಲಾಖೆ ನಿರ್ಲಕ್ಷೃ ಮಾಡುತ್ತಿರುವುದು ಎಷ್ಟು ಎಂಬ ಪ್ರಶ್ನೆಗೆ ಸಾರ್ವಜನಿಕ ವಲಯದ್ದು.

ಸರ್ಕಾರಿ, ಖಾಸಗಿ ಮತ್ತು ಅಸಂಘಟಿತ ವಲಯದಲ್ಲಿ ಯಾವುದೇ ಯೋಜನೆ ಮತ್ತು ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಕಾರ್ಮಿಕರಿಗೆ ಹಕ್ಕು ಒದಗಿಸಿಕೊಡುವಂತೆ ಕೇಳಲು ಸಾಕಷ್ಟು ಕಾರ್ಮಿಕ ಸಂಘಟನೆಗಳು ಇವೆ. ಹಾಗಾಗಿ, ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಅರಿವು ಮೂಡಿಸುವ ಮೂಲಕ ಸರ್ಕಾರಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಇಂತಹ ಮಹಾನ್ ಕಾರ್ಯಕ್ಕೆ ಜನಪ್ರತಿನಿಧಿಗಳೂ ಕೈ ಜೋಡಿಸುವ ಮೂಲಕ ಕಾರ್ಮಿಕ ಇಲಾಖೆಯ ಯೋಜನೆ ಹಳ್ಳ ಹಿಡಿಯದಂತೆ ಮಾಡಬೇಕಿದೆ.

ಕಾರ್ಮಿಕ ದಿನಚಾರಣೆ ದಿನದಂದು ಕಾರ್ಮಿಕರನ್ನು ಹೊಗಳುವುದು ಮತ್ತು ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡುವ ಮೂಲಕ ಮೊಸಳೆ ಕಣ್ಣೀರು ಹಾಕಿದರೆ ಕಾರ್ಮಿಕರ ಬದುಕಿನಲ್ಲಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ. ಕರ್ತವ್ಯನಿರತ ಕಾರ್ಮಿಕ ಮೃತಪಟ್ಟಾಗ ಕುಟುಂಬಸ್ಥರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಬಡ ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿದ್ಯಾಭ್ಯಾಸ ಮತ್ತು ಉದ್ಯೋಗದ ಬಗ್ಗೆ ಕಾಳಜಿ ವಹಿಸಿದಾಗ ಕಾರ್ಮಿಕರ ಬಗ್ಗೆ ಮಾತನಾಡುವ ನೈತಿಕ ಹೊಣೆಗಾರಿಕೆಗೆ ಬೆಲೆ ಸಿಕ್ಕಂತಾಗುತ್ತದೆ. ಇಲ್ಲದಿದ್ದಲ್ಲಿ ಕಾರ್ಮಿಕರ ಕುರಿತ ಕಾರ್ಯಕ್ರಮಗಳು ನಾಟಕೀಯ ವಿದ್ಯಮಾನವಾಗಿ, ಕಾಟಾಚಾರದ ಕಾರ್ಯಕ್ರಮವಾಗಿ ಉಳಿಯುತ್ತದೆ.
ಬೆಟ್ಟಪ್ಪ ಅಧ್ಯಕ್ಷ, ಸುಂಟಿಕೊಪ್ಪ ತಲೆ ಕಾರ್ಮಿಕರ ಸಂಘ

ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿದ್ದಾರೆ. ಈ ಭಾಗದಲ್ಲಿ ಇಲಾಖೆಗೆ ನೋಂದಣಿ ಮಾಡಿಕೊಳ್ಳುವ ಬಗ್ಗೆ ಅರಿವಿಲ್ಲದೆ ಫಲಾನುಭವಿಗಳಾದೆ ವಂಚಿತರಾಗಿದ್ದೇವೆ. ಆದ್ದರಿಂದ ಕಾರ್ಮಿಕ ಇಲಾಖೆಯು ಆಗಾಗ್ಗೆ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದಲ್ಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
ಇಲ್ಯಾಸ್, ತಲೆಹೊರೆ ಕೂಲಿ ಕಾರ್ಮಿಕ, ಸುಂಟಿಕೊಪ್ಪ

ಕಟ್ಟಡ ಕಾರ್ಮಿಕರಾಗಿದ್ದಲ್ಲಿ ಸೌಲಭ್ಯಗಳನ್ನು ಪಡೆಯಲು ಅವಕಾಶವಿದ್ದು, ತಾಲೂಕು ಕೇಂದ್ರಗಳಲ್ಲಿ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳು ನಿಯೋಜಿಸಲಾಗಿದೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಚೇರಿ, ಕುಶಾಲನಗರದಲ್ಲೂ ಕಚೇರಿ ಇದ್ದು, ಕಾರ್ಮಿಕರಿಗೆ ಮಾಹಿತಿ ನೀಡುತ್ತಾರೆ. ಕಾರ್ಮಿಕರು ಸಂಬಂಧಿಸಿದ ದಾಖಲಾತಿಯನ್ನು ನೀಡಿದರೆ ಕಟ್ಟಡ ಕಾರ್ಮಿಕರ ಪ್ರಮಾಣಪತ್ರ ಸಿಗಲಿದೆ ಜತೆಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಅನಿಲ್ ಭಾಗತಿ, ಜಿಲ್ಲಾ ಕಟ್ಟಡ ಕಾರ್ಮಿಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net