ರೈತರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಣೆ

Working as a backbone for farmers
ಹುನಗುಂದ ತಾಲೂಕಿನ ನಾಗೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಮಳಿಗೆಗಳ ಅಡಿಗಲ್ಲನ್ನು ಶಾಸಕ ವಿಜಯಾನಂದ ಕಾಶಪ್ಪನವರ ಹಾಕಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಗವ್ವ ಮಾದರ, ಸಂಘದ ಉಪಾಧ್ಯಕ್ಷ ಬಸವರಾಜ ನರಗುಂದ ಇದ್ದರು.
Published on

ಹುನಗುಂದ: ಮತ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಕೋಟಿ ರೂ. ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲೂಕಿನ ನಾಗೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲಾಕರ್ ಉದ್ಘಾಟನೆ ಹಾಗೂ ನೂತನ ಮಳಿಗೆಗಳ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ. ಜತೆಗೆ ರೈತರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಪ್ರಮಾಣದ ಬೆಳೆ ಸಾಲ ನೀಡಲು ಆರ್.ಬಿ.ಐ ನಿಯಮಗಳು ಅಡ್ಡಿಯಾಗಿವೆ. ಮುಂಬರುವ ದಿನಗಳಲ್ಲಿ ರೈತರಿಗೆ ನೀಡುವ ಬೆಳೆ ಸಾಲವನ್ನು 50 ಸಾವಿರದಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದರು.

ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೊಠಡಿಗಳ ನಿರ್ಮಾಣ, ದನದ ದವಾಖಾನೆ, ಬಸ್ ನಿಲ್ದಾಣ ನಿರ್ಮಾಣ, ರಸ್ತೆ ದುರಸ್ತಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಗ್ರಾಮಸ್ಥರ ಬೇಡಿಕೆಗಳನ್ನು ಒಂದು ವರ್ಷಗಳ ಒಳಗಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರಿಸಂಗಪ್ಪ ನರಸಾಪುರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಸಂಘ ಪ್ರಗತಿ ಕಾಣುತ್ತಿದೆ. ಸಂಘದಿಂದ ಬೆಳೆ ಸಾಲ, ಬಂಗಾರ, ಜಾಮೀನು ಸಾಲ ನೀಡಲಾಗುತ್ತಿದೆ. ಉಳಿತಾಯ ಹಣವನ್ನು ಹೆಚ್ಚಿಸಿದ್ದೇವೆ. ಮಳಿಗೆಗಳ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಶಾಸಕರು ಅನುದಾನ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಗವ್ವ ಮಾದರ, ಸಂಘದ ಉಪಾಧ್ಯಕ್ಷ ಬಸವರಾಜ ನರಗುಂದ, ಮಹಾಂತೇಶ ನಾಡಗೌಡ, ಹುನಗುಂದ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಮಹಾಂತೇಶ ಮುರುಡಿ, ಬಸವರಾಜ ಹೊಸಮನಿ, ಸಂಗಪ್ಪ ಹೂಲಗೇರಿ, ಮುಖ್ಯ ಕಾರ್ಯನಿರ್ವಾಹಕ ಮಲ್ಲಪ್ಪ ಹುಬ್ಬಳ್ಳಿ ನಾಗೂರ ಮತ್ತು ಯಡಹಳ್ಳಿ ಗ್ರಾಮದ ಶೇರದಾರರು ಭಾಗವಹಿಸಿದ್ದರು. ಮಾಂತೇಶ ದ್ಯಾಮನಗುಡಿ ಸ್ವಾಗತಿಸಿದರು. ಮಲಕಾಜಗೌಡ ಪರುತಗೌಡರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net