

ಉಡುಪಿ: ರಾಜ್ಯದ ಬಿಜೆಪಿ ಸರ್ಕಾರ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯಲ್ಲಿ 450 ಕೋಟಿ ರೂ. ಹಣ ಸ್ಲಂ ಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ ನೀಡಿರುವ ಕ್ರಮ ಖಂಡನೀಯ. ಕೂಡಲೇ ಹಣವನ್ನು ಮಂಡಳಿ ವಾಪಸು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್, ಸಿಡಬ್ಲ್ಯುಎಫ್‌ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 37 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಅವರಿಗೆ ಯಾವುದೇ ಆರ್ಥಿಕ ನೆರವು ನೀಡಲು ಕ್ರಮವಹಿಸದ ಮಂಡಳಿ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೊಳಚೆ ನಿರ್ಮೂಲನ ಮಂಡಳಿ ಮೂಲಕ ನಿರ್ಮಾಣ ಆಗುತ್ತಿರುವ 21 ಸಾವಿರ ಮನೆಗಳಿಗೆ 433 ಕೋಟಿ ಹಣ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸುವ 423 ಮನೆಗಳಿಗೆ 8.33 ಕೋಟಿ ಹಣವನ್ನು ಏಜೆನ್ಸಿದಾರರಿಗೆ ವರ್ಗಾಯಿಸಿ ಲಕ್ಷಾಂತರ ಬಡ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸೆಸ್ ರೂಪದಲ್ಲಿ ಸಂಗ್ರಹವಾದ ನೂರಾರು ಕೋಟಿ ರೂ. ಬೆವರಿನ ಹಣದ ಮೇಲೆ ಕಣ್ಣು ಹಾಕಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಮಂಡಳಿಯಲ್ಲಿ ಈಗಾಗಲೇ ವಸತಿ ನಿರ್ಮಾಣಕ್ಕೆ ಅರ್ಜಿಗಳನ್ನು ಸಲ್ಲಿಸಿ, ಕಾರ್ಮಿಕರು ಕಾಯುತ್ತಿದ್ದರೂ ಮಂಡಳಿ ಅಧಿಕಾರಿಗಳು ಸ್ಪಷ್ಟವಾದ ಯೋಜನೆ ರೂಪಿಸದೇ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಸ್ಲಂ ಬೋರ್ಡ್‌ಗೆ ವರ್ಗಾವಣೆ ಮಾಡಿರುವ ಹಣವನ್ನು ಮಂಡಳಿಗೆ ವಾಪಾಸ್ ಪಡೆಯಬೇಕು. ನೋಂದಾಯಿತ ನೈಜ ಕಟ್ಟಡ ಕಾರ್ಮಿಕರಿಗೆ ಮಾತ್ರವೇ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಸಂಸಘಟನೆ ಮುಖಂಡರಾದ ಸುರೇಶ ಕಲ್ಲಾಗರ, ರೊನಾಲ್ಡ್ ಕ್ವಾಡ್ರಸ್ ಉಪಸ್ಥಿತರಿದ್ದರು.