

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಹಾಗೂ ಧಾರವಾಡ ವಿಭಾಗದ ಕಟ್ಟಡ ಕಾರ್ಮಿಕರ ಸಂಘಗಳು ಇಲ್ಲಿಯ ಕಾರ್ಮಿಕ ಭವನದ ಮುಂದೆ ನಡೆಸಿದ್ದ ಅನಿರ್ದಿಷ್ಟಾವಧಿ ಧರಣಿಯು, ಗುರುವಾರ ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆಯಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಆ. 4ರಿಂದ ಧರಣಿ ಆರಂಭಿಸಲಾಗಿತ್ತು. ಗುರುವಾರ ಸ್ಥಳಕ್ಕೆ ಆಗಮಿಸಿದ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಪ ಕಾರ್ಯದರ್ಶಿ ಉಮೇಶ ಎಚ್., ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ. ಹಾಗೂ ಪೊಲೀಸರು, ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಆಗಮಿಸುವವರೆಗೆ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.
ಆ. 9ರಂದು ಕಾರ್ಮಿಕ ಸಭೆ ಕರೆದು ಚರ್ಚೆ ಮಾಡಿ ಬೇಡಿಕೆ ಈಡೇರಿಸುವುದಾಗಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದ್ದರಿಂದ ಹೋರಾಟ ಹಿಂಪಡೆಯಲಾಯಿತು. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಮತ್ತೆ ಹೋರಾಟ ತೀವ್ರಗೊಳಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡರಾದ ಶಿವಕುಮಾರ ಬಂಡಿವಡ್ಡರ, ಅಶ್ವತ್ಥ ಮರಿಗೌಡರ, ವಾಸು ಲಮಾಣಿ, ಎಸ್.ಪಿ. ಕರಿಸೋಮನಗೌಡರ, ಮುಸ್ತಾಕ ನದಾಫ್, ಲಕ್ಷ್ಮಣ ಗುಡಾರದ, ಶಿವಾನಂದ ಅಸೂಟಿ, ದೇವೇಂದ್ರ ಕಾಲವಾಡ, ಶಿವು ರಾಠೋಡ, ನಿಂಗಪ್ಪ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.