9ರಂದು ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

protest-fist-sketch-22337688
Published on

ಸೋಮವಾರಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.9ರಂದು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್‌ ಯೂನಿಯನ್(ಎಐಯುಟಿಸಿ) ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಹೇಳಿದರು.

ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿಂದ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಲಿದ್ದು, ಪಟ್ಟಣದ ಮುಖ್ಯ ರಸ್ತೆಯಲ್ಲಿ ತೆರಳಿ ತಾಲೂಕು ಕಚೇರಿಯನ್ನು ತಲುಪಿ ತಹಸೀಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ, ರೈತ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ತಂದು ಕಾರ್ಮಿಕರ ಕತ್ತು ಹಿಸುಕುವ ಕೃತ್ಯ ಮಾಡುತ್ತಿದೆ ಎಂದು ಆರೋಪಿಸಿದರು.

8 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಲು ಕಾನೂನು ರೂಪಿಸುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶ ಮತ್ತು ನಾಲ್ಕು ತಿಂಗಳು ಮಳೆಯಿರುತ್ತದೆ. ಬಡ ಕಾರ್ಮಿಕರು ಚಳಿಯಲ್ಲಿ 10 ಗಂಟೆ ಕೆಲಸ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮಸೂದೆಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 70 ವರ್ಷಗಳಿಂದ ಕಾರ್ಮಿಕರು ಶಿಥಿಲಾವಸ್ಥೆ ತಲುಪಿರುವ ಲೈನ್‌ಮನೆಗಳಲ್ಲಿ ವಾಸ ಮಾಡುತ್ತ ಕೂಲಿ ಮಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅನೇಕರು ಮುರುಕಲು ಗುಡಿಸಲಿನಲ್ಲೇ ಜೀವಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಪೈಸಾರಿ ಜಾಗವನ್ನು ಉಳ್ಳುವರು ಒತ್ತುವರಿ ಮಾಡಿಕೊಂಡಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಒತ್ತುವರಿ ಸರ್ಕಾರಿ ಜಾಗವನ್ನು ಮುಟ್ಟುಗೋಲು ಹಾಕಿ, ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಸೋಮಪ್ಪ ಆಗ್ರಹಿಸಿದರು.

ಕಳೆದ 20 ವರ್ಷಗಳಿಂದ ಸಂಘಟನೆ ನಿವೇಶನಕ್ಕಾಗಿ ಪ್ರತಿಭಟನೆ ಮಾಡುತ್ತ ಬಂದಿದೆ. ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಜಿಲ್ಲಾಡಳಿತ ಇದುವರೆಗೆ ನಿವೇಶನ ನೀಡಿಲ್ಲ. ಕಾರ್ಮಿಕರು ಈ ದೇಶದ ಪ್ರಜೆಗಳು. ಕಾರ್ಮಿಕರು ತೆರಿಗೆ ಕಟ್ಟುತ್ತಾರೆ. ನಮಗೂ ಭೂಮಿ ಪಡೆದುಕೊಳ್ಳುವ ಹಕ್ಕಿದೆ. ಕೂಡಲೇ ನಿವೇಶನಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಸಂಘಟನೆ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ಜಿಲ್ಲಾ ಸಲಹೆಗಾರ ಶೇಷಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net