

ಮೈಸೂರು : ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಹಯೋಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ಚೌಕ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.
ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷ ಸಮೀಪಿಸುತ್ತಿದೆ. 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾವಣೆ, ಡಾ.ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಬೆಂಬಲ ಬೆಲೆಯ ಕಾನೂನು ಜಾರಿಯ ಕುರಿತ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿ ಇದೀಗ ಜನರನ್ನು ಸುಲಿಗೆ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿದ್ದು, ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುತ್ತಿದೆ. ದೇಶವನ್ನು ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಿದ್ದಲ್ಲದೆ ಸರ್ಕಾರದ ನೀತಿಯ ಆಸ್ತಿಯನ್ನು ಎನ್‌ಎಂಪಿ ಮುಖಾಂತರ ಖಾಸಗಿಯವರಿಗೆ ದಾನ ಮಾಡಿದರೆ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಲು ಸಾಧ್ಯವಿದೆಯೇ? ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂದರೆ ಸಾರ್ವಜನಿಕ ಒಡೆತನವನ್ನು ಖಾಸಗಿ ವ್ಯಕ್ತಿಗಳಿಗೆ ಅಡಮಾನ ಇಡುವುದೇ ಎಂದು ಪ್ರಶ್ನಿಸಿದರು.
ಆದ್ದರಿಂದ ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು, ದೇಶದ ಎಲ್ಲ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಗಳ ಮೇಲೆ ದೆಹಲಿಯಲ್ಲಿ ಪೊಲೀಸ್ ದಬ್ಬಾಳಿಕೆ ಖಂಡನೀಯ ಎಂದೂ ಕಿಡಿಕಾರಿದರು
ಬೇಡಿಕೆಗಳು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿ ಜಾರಿಗೆ ತರಬೇಕು, ಎಲ್ಲ ಸ್ವರೂಪದ ಖಾಸಗೀಕರಣ ಕೈಬಿಡಬೇಕು, ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಟ್ಟು ಕಾರ್ಮಿಕರ ಪರವಾದ ನೀತಿಗಳನ್ನು ಅನುಷ್ಠಾನಕ್ಕೆ ತರುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು
ಸಂಘಟನೆಗಳ ಪದಾಧಿಕಾರಿಗಳಾದ ದೇವದಾಸ್, ಜವರಯ್ಯ, ಎನ್.ಕೆ.ಬಾಲಾಜಿರಾವ್, ಜಗದೀಶ್, ಪಿ.ಮರಂಕಯ್ಯ, ಚಂದ್ರಶೇಖರ್ ಮೇಟಿ, ಶೇಷಾದ್ರಿ, ಪಿ.ಎಸ್.ಸಂಧ್ಯಾ, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜಯೇಂದ್ರ ಇತರರು ಇದ್ದರು.