

ಆನೇಕಲ್: ಬೆಂ.ದಕ್ಷಿಣ ಕ್ಷೇತ್ರದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಕರೊನಾ ಭಯದಿಂದಾಗಿ ಸ್ವಂತ ಊರಿನತ್ತ ಮುಖ ಮಾಡಿದ್ದರೂ ಜನಪ್ರತಿನಿಧಿಗಳು ಕಾರ್ಮಿಕರ ಮನವೊಲಿಸದಿರುವುದು ಸಾಕಷ್ಟು ದುಷ್ಪರಿಣಾಮಕ್ಕೆ ಮುನ್ನುಡಿಯಾಗಲಿದೆ.
ಜಿಗಣಿ ವ್ಯಾಪ್ತಿಯಲ್ಲಿ ನೂರಾರು ಕಾರ್ಖಾನೆಗಳು, ಹಲವಾರು ಕಂಪನಿಗಳಿದ್ದು, ಕಾರ್ಮಿಕರನ್ನೇ ನಂಬಿರುವ ನೂರಾರು ಕಂಪನಿಗಳು ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸ್ಥಿತಿ ತಲೆದೋರಿದೆ.
ಕಾರ್ಮಿಕರ ಮನವೊಲಿಸಬೇಕಿದ್ದ ಶಾಸಕ ಎಂ.ಕೃಷ್ಣಪ್ಪ ಒಂದು ಸಭೆಯನ್ನೂ ನಡೆಸಿಲ್ಲ. ಬನ್ನೇರುಘಟ್ಟದಿಂದ 20 ಕಿಮೀ ದೂರದ ಹಾರಗದ್ದೆವರೆಗೆ 300ಕ್ಕೂ ಹೆಚ್ಚು ಗ್ರಾೃನೈಟ್ ಮಳಿಗೆಗಳಿವೆ. ಇಲ್ಲಿ ಕೆಲಸ ಮಾಡುವವರು ಉತ್ತರ ಪ್ರದೇಶ, ಒಡಿಶಾ, ಮಧ್ಯಪ್ರದೇಶ ಹಾಗೂ ಅಸ್ಸಾಂ ಮೂಲದವರು. ಈಗಾಗಲೇ ಸಾಕಷ್ಟು ಕಾರ್ಮಿಕರು ಗ್ರಾಪಂ, ಪುರಸಭೆಗೆ ತೆರಳಿ ಊರಿಗೆ ತೆರಳಲು ದಾಖಲೆ ಸಿದ್ಧ ಮಾಡಿಕೊಂಡು ಅನುಮತಿಗಾಗಿ ಕಾಯುತ್ತಿದ್ದಾರೆ. ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕಾರ್ಮಿಕರ ಸಭೆ ನಡೆಸಿ ಧೈರ್ಯ ತುಂಬಿದ್ದರೆ ಕಾರ್ಮಿಕರನ್ನು ಇಲ್ಲೇ ಉಳಿಸಿಕೊಳ್ಳಬಹುದಿತ್ತು.
ಕಿಟ್ ನೀಡಿಕೆಯಲ್ಲಿ ತಾರತಮ್ಯ: ಸರ್ಕಾರದಿಂದ ಕಾರ್ಮಿಕರಿಗೆ ನೀಡಲು ಆಹಾರ ಕಿಟ್‌ಗಳು ಪಂಚಾಯಿತಿ ವ್ಯಾಪ್ತಿಗೆ ಬಂದಿವೆ. ಆದರೆ ಸರಿಯಾಗಿ ವಿತರಣೆ ಮಾಡುವಲ್ಲಿ ಶಾಸಕ ಎಂ.ಕೃಷ್ಣಪ್ಪ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರ ಪರವಾಗಿ ನಿಲ್ಲಬೇಕಾದ ಶಾಸಕರು, ಉಳ್ಳವರು ಹಾಗೂ ಬಲಾಢ್ಯರ ಪರವಾಗಿ ಮಾತ್ರ ಕೆಲಸ ಮಾಡಿದರೆ ಕ್ಷೇತ್ರದಲ್ಲಿ ಆಗಬಹುದಾದ ತೊಂದರೆಗೆ ಯಾರು ಹೊಣೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ.
ಮನೆ ಖಾಲಿ ಮಾಡಿಸುತ್ತಿರುವ ಮಾಲೀಕರು: ಕಾರ್ಮಿಕರು ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಖಾಲಿ ಮಾಡಿಸುತ್ತಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಮಾಲೀಕರ ಸಭೆ ಕರೆದು ಮನವೊಲಿಸುವ ಕಾರ್ಯವನ್ನೂ ಶಾಸಕರು ಮಾಡಿಲ್ಲ. ಬನ್ನೇರುಘಟ್ಟ ಗ್ರಾಪಂ, ಜಿಗಣಿ, ಹಾರಗದ್ದೆ ಭಾಗದಲ್ಲಿ ಕಾರ್ಮಿಕರ ಬಗ್ಗೆ ಶಾಸಕರ ನಿರ್ಲಕ್ಷ್ಯ ಏಕೆ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ನೀಡಬೇಕಾದ ಆಹಾರಧಾನ್ಯದ ಕಿಟ್ ವಿತರಣೆ ಮಾಡುವಲ್ಲಿ ಶಾಸಕರು ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಕಿಟ್‌ಗಳು ಎಲ್ಲಿ ಹೋದವು?: ಈ ಭಾಗದಲ್ಲಿ 20,000ಕ್ಕೂ ಹೆಚ್ಚು ಕಾರ್ಮಿಕರಿದ್ದು, ಸರ್ಕಾರದಿಂದ ಬಂದ ಆಹಾರಧಾನ್ಯದ ಕಿಟ್‌ಗಳನ್ನು ಕಾರ್ಮಿಕರಿಗೆ ಎಲ್ಲಿ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ. ಯರಂಡಹಳ್ಳಿಯ ಸ್ತ್ರೀಶಕ್ತಿ ಭವನಕ್ಕೆ ಕಿಟ್ ತರಲಾಗಿತ್ತು. ನಂತರ ಕಿಟ್‌ಗಳು ಎಲ್ಲಿ ಹೋದವು ಎಂದು ಹೆನ್ನಾಗರ ಗ್ರಾಪಂ ಅಧ್ಯಕ್ಷ ಆರ್.ಕೆ. ಕೇಶವರೆಡ್ಡಿ ಪ್ರಶ್ನಿಸುತ್ತಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಹಾಗೂ ಆನೇಕಲ್ ಶಾಸಕ ಬಿ.ಶಿವಣ್ಣ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಜತೆ ಆದಷ್ಟು ಬೇಗ ಸಭೆ ಕರೆದು ಕಾರ್ಮಿಕರನ್ನು ಇಲ್ಲೇ ಉಳಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚುವ ದಿನ ದೂರವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಎಂ.ಕೃಷ್ಣಪ್ಪ ಕಾಳಜಿ ವಹಿಸದಿರುವ ನಡೆಯನ್ನು ಕ್ಷೇತ್ರದ ಜನ ವಿರೋಧಿಸಿದ್ದಾರೆ.