ಕಾರ್ಮಿಕರ ಕಾಲಿಗೆ ನಮಸ್ಕರಿಸಿದ ತಹಸೀಲ್ದಾರ್

1CNC1A-Web
ಚಿಂಚಲಿ ಪಟ್ಟಣದಲ್ಲಿ ಕಾರ್ಮಿಕ ದಿನದ ನಿಮಿತ್ತ ಪೌರ ಕಾರ್ಮಿಕರ ಕಾಲು ಮುಟ್ಟಿ ನಮಸ್ಕರಿಸುತ್ತಿರುವ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ.
Published on

ಚಿಂಚಲಿ: ಮಹಾಮಾರಿ ಕರೊನಾ ವೈರಸ್ ನಿಯಂತ್ರಣ ಹೋರಾಟದಲ್ಲಿ ಸಕ್ರಿಯರಾಗಿರುವ ಪೌರಕಾರ್ಮಿಕರನ್ನು ರಾಯಬಾಗ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಶುಕ್ರವಾರ ಸನ್ಮಾನಿಸಿ, ಕಾಲಿಗೆ ನಮಸ್ಕರಿಸುವ ಮೂಲಕ ಗೌರವಿಸಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಭಜಂತ್ರಿ, ಮಹಾಮಾರಿ ಕರೊನಾ ಸೋಂಕು ಹಬ್ಬಿರುವ ಸಮಯದಲ್ಲಿ ನಗರ ಮತ್ತು ಪಟ್ಟಣಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದರು.

ಜಿಲ್ಲಾಡಳಿತ ಸೇರಿ ತಾಲೂಕಾಡಳಿತವು ಕರೊನಾ ಸೋಂಕಿನ ವಿರುದ್ಧ ಹೋರಾಡಲು ಪೌರಕಾರ್ಮಿಕರು ಸಹಕರಿಸಬೇಕು. ಶುಕ್ರವಾರ ಕುಡಚಿಯಲ್ಲಿ ಮತ್ತೆ ಮೂರು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರು ಮನೆಯಲ್ಲಿದ್ದು ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಜಿ. ಪೂಜೇರಿ, ಗ್ರಾಮಲೆಕ್ಕಾಧಿಕಾರಿ ಜಗದೀಶ ಕಿತ್ತೂರು ಹಾಗೂ ಪಪಂ ಸಿಬ್ಬಂದಿ ಇದ್ದರು. ಎಸ್.ಪಿ. ಕಂಕಣವಾಡಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net