

ಶಿವಮೊಗ್ಗ: ಯುವನಿಧಿ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸಬೇಕಿದೆ. ಯುವನಿಧಿ ಜತೆಗೆ ಮೊದಲ ನಾಲ್ಕೂ ಯೋಜನೆಯ ಫಲಾನುಭವಿಗಳನ್ನು ಕರೆತರುವ ಜವಾಬ್ದಾರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರದ್ದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ ಕುರಿತ ಜಿಲ್ಲಾಮಟ್ಟದ ಕಾಂಗ್ರೆಸ್ ಪ್ರಮುಖರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬರುತ್ತಿದ್ದು ಅತಿ ಹೆಚ್ಚು ಸಂಖ್ಯೆಯಲ್ಲಿ ಯುವನಿಧಿಗೆ ನೋಂದಣಿ ಮಾಡಿಸಬೇಕಿದೆ. ಆ ಮೂಲಕ ಈ ಬಾರಿ ಸಂಸತ್ ಚುನಾವಣೆಯನ್ನು ಇಡೀ ದೇಶಾದ್ಯಂತ ಗೆಲ್ಲಲೇಬೇಕಿದೆ ಎಂದರು.